ಮಲ್ಪೆ, ಅ. 24 (DaijiworldNews/MB) : ಮಲ್ಪೆ ಕಡಲ ತಡಿಯಲ್ಲಿ ಕಾನೂನುಬಾಹಿರವಾಗಿ ಅಕ್ರಮ ಮೀನುಗಾರಿಕೆ ನಡೆಸಿದ ತಮಿಳುನಾಡು ಮೀನುಗಾರರು ವಿರುದ್ದ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಿಶೋರ್ ಕರ್ಕೇರ ಎಂಬವರು ಶಾನ್ ರಾಜ್ ಎಂಬುವವರಿಗೆ ಸೇರಿದ ಮಕರ ಸಂಕ್ರಾಂತಿ ಬೋಟಿನಲ್ಲಿ ಅಕ್ಟೋಬರ್ 22 ರಂದು ಬೆಳಿಗ್ಗೆ 6:30 ಗಂಟೆಗೆ ಮಲ್ಪೆ ಬಂದರಿನಿಂದ ಅರಬ್ಬಿ ಸಮುದ್ರಕ್ಕೆ ಹೊರಟು ಸುಮಾರು 11 ನಾಟಿ ಮೈಲ್ ದೂರದಲ್ಲಿ ಮೀನುಗಾರಿಕೆ ಮಾಡಿಕೊಂಡಿದ್ದ ವೇಳೆ ಬೇರೆ ರಾಜ್ಯಕ್ಕೆ ಸೇರಿದ 2 ದೈತ್ಯ ಗಾತ್ರದ ಬೋಟುಗಳು ಕಿಶೋರ್ ಕರ್ಕೇರ ಅವರಿದ್ದ ಬೋಟಿನ ಸಮೀಪಕ್ಕೆ ಬಂದು ಚಾಕು , ಚೂರಿ, ಕತ್ತಿ ,ಕಬ್ಬಿಣದ ರಾಡ್ ಇತ್ಯಾದಿ ಮಾರಾಕಾಸ್ತ್ರಗಳನ್ನು ತೋರಿಸಿ ಈ ಸ್ಥಳದಲ್ಲಿ ಮೀನುಗಾರಿಕೆ ಮಾಡದಂತೆ ತಮಿಳು ಭಾಷೆಯಲ್ಲಿ ಬೆದರಿಕೆ ಹಾಕಿದ್ದರು.
ಎರಡು ಬೋಟುಗಳಲ್ಲಿ ತಲಾ 10 ಮಂದಿ ಇದ್ದು ಅವರಲ್ಲಿ ಒಂದು ಬೋಟ್ ಪರಾರಿಯಾಗಿದ್ದು ಇನ್ನಂದು ಬೋಟಿನ ಹೆಸರು ''ಇಂಡಿಯನ್'' ಎಂಬುದಾಗಿದೆ. ಈ ಬೋಟಿನಲ್ಲಿ ಇದ್ದವರು ಅಕ್ರಮವಾಗಿ ಮೀನುಗಾರಿಕೆ ನಡೆಸಿದ್ದಲ್ಲದೇ ಗೂಂಡಾಗಿರಿ ಮಾಡಿದ್ದು ಮಲ್ಪೆಯ ಬೋಟಿನಲ್ಲಿದ್ದವರನ್ನು ಕೊಲ್ಲುವ ಉದ್ದೇಶದಿಂದ ಬೋಟಿಗೆ ಜೋರಾಗಿ ಡಿಕ್ಕಿ ಹೊಡೆದಿದ್ದು ಈ ಸಂದರ್ಭದಲ್ಲಿ ರಾಮ್, ದೇವ್ ,ದಾನಯ್ಯ, ಕಾಳಯ್ಯ ,ದಿವಾಕರ್, ಜನ್ನ ಎಂಬುವವರು ನೀರಿಗೆ ಬಿದ್ದಿದ್ದಾರೆ. ಆ ಕೂಡಲೇ ಹತ್ತಿರದ ಬೋಟಿನ ಸ್ಥಳೀಯರು ಸೇರಿ ಬೋಟಿನವರನ್ನು ಮತ್ತು ಡಿಕ್ಕಿ ಮಾಡಿದ ಇಂಡಿಯನ್ ಬೋಟ್ನ್ನು ಮಲ್ಪೆ ಬಂದರಿನ ದಡಕ್ಕೆ ತಂದಿದ್ದಾರೆ.
ಬೋಟ್ನಲ್ಲಿರುವವರನ್ನು ವಿಚಾರಿಸಿದ ಸಂದರ್ಭ ಅವರು ತಮಿಳುನಾಡಿನ ಕನ್ಯಾಕುಮಾರಿಯ ರಾಬಿನ್ ಸನ್ (36), ಜೆಕಾರಿಯಾ (27), ಪ್ರವೀಣ (18), ರೋಹನ್ ಡಿಜೋ (18), ಅರುಳ್ (42), ಜೋಸೆಫ್ ಅಜಯನ್ (50), ಸುಬ್ಬೀನ್ (20), ಅರುಳ್ ಶೀಲನ್ (40) ಅಬ್ಬೀನ್ ಸ್ಯಾಮ್ಯುಲ್ (18) ಎಂದು ತಿಳಿದು ಬಂದಿದೆ.
ಇನ್ನು ಅನ್ಯರಾಜ್ಯದ ಬೋಟ್ನವರು ಮಾಡಿದ ಈ ಕೃತ್ಯದಿಂದಾಗಿ ಮಕರ ಸಂಕ್ರಾಂತಿ ಪರ್ಸೀನ್ ಬೋಟ್ನವರಿಗೆ ಸುಮಾರು 25 ಲಕ್ಷ ನಷ್ಟವುಂಟಾಗಿದೆ.