ಉಡುಪಿ, ಅ. 24 (DaijiworldNews/MB) : ಉಡುಪಿ ನಗರಸಭೆಯಲ್ಲಿ ದಲಿತರ ಮೀಸಲು ಹಣದಲ್ಲಿ ಆರೋಗ್ಯ ಕಾರ್ಡು ಯೋಜನೆಯಡಿಯಲ್ಲಿ ದೊಡ್ಡ ಮೊತ್ತದ ಅವ್ಯವಹಾರ ನಡೆದಿದೆ. ಶೇ. 50 ರಷ್ಟು ಮಂದಿಗೆ ಆರೋಗ್ಯ ಕಾರ್ಡು ಪರಿಚಯವೇ ಇಲ್ಲ. ಒಂದು ವರ್ಷಕ್ಕೆ ರೂ. 50 ಲಕ್ಷ ಪ್ರೀಮಿಯಂ ಪಾವತಿಸಲಾಗುತ್ತದೆ. ಸತ್ತವರ ಹೆಸರಿನಲ್ಲಿ ಪ್ರೀಮಿಯಂ ಪಾವತಿಸಿ ಲಕ್ಷಾಂತರ ರೂಪಾಯಿ ಅವ್ಯವಹಾರ ನಡೆದಿದೆ ಎಂದು ಸುಂದರ್ ಮಾಸ್ತರ್, ಜಿಲ್ಲಾ ಪ್ರಧಾನ ಸಂಚಾಲಕರು ಆರೋಪಿಸಿದರು.



ಅವರು ಶನಿವಾರ ಉಡುಪಿ ಪ್ರೆಸ್ ಕ್ಲಬ್ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತ , 'ಕಳೆದ 8 ವರ್ಷಗಳಿಂದ ಈ ಯೋಜನೆಯಡಿ ಮೀಸಲು ಹಣದಲ್ಲಿ 5.24 ಕೋಟಿ ವಿನಿಯೋಗಿಸಿದ್ದು, ಖಾಸಗಿ ಇನ್ನೂರೆನ್ಸ್ ಕಂಪೆನಿಯೊಂದಿಗೆ ನಗರಸಭೆಯ ಅಧಿಕಾರಿಗಳು ಶಾಮೀಲಾಗಿರುತ್ತಾರೆ. ಮೂಡುಬೆಟ್ಟು ಒಂದೇ ವಾರ್ಡಿನಲ್ಲಿ 30 ಜನರು ನಿಧನ ಹೊಂದಿದ್ದು, ಅವರೆಲ್ಲರ ಹೆಸರಿನಲ್ಲಿ ಪ್ರೀಮಿಯಂ ಪಾವತಿಸಲಾಗಿದೆ. ಹಾಗಾದರೆ 35 ವಾರ್ಡುಗಳಲ್ಲಿ ಕಳೆದ ಸತ್ತವರ ಸಂಖ್ಯೆ ಇನ್ನಷ್ಟು ಹೆಚ್ಚಾಗಿರುವುದು ಸ್ಪಷ್ಟವಾಗಿದೆ. ಅಲ್ಲದೆ ಆರೋಗ್ಯ ಕಾರ್ಡುಗಳನ್ನು ಸಂಬಂಧಪಟ್ಟ ಕಂಪೆನಿ ಅಥವಾ ನಗರಸಭೆ ವಿತರಿಸುವುದಿಲ್ಲ ಎಂದು ತಿಳಿಸಿದ್ದಾರೆ.
ದುರ್ಬಳಕೆಯಾದ ಹಣ ಮರುಪಾವತಿಯಾಗಬೇಕು. ಈ ಬಗ್ಗೆ ಜಿಲ್ಲಾಡಳಿತ, ನಿರ್ಲಕ್ಷ್ಯ ವಹಿಸಿದಲ್ಲಿ ಮುಂದಿನ 15 ದಿನಗಳ ನಂತರ ಅವ್ಯವಹಾರಗಳನ್ನು ಖಂಡಿಸಿ ಸೂಕ್ತ ತನಿಖೆಗೆ ಒತ್ತಾಯಿಸಿ ಜಿಲ್ಲಾ ಮಟ್ಟದಲ್ಲಿ ನಮ್ಮ ಸಂಘಟನೆಯಿಂದ ನಗರಸಭೆಯ ಎದುರು ಪ್ರತಿಭಟನೆ ನಡೆಸಲಾಗುವುದು, ಎಂದು ಎಚ್ಚರಿಕೆ ಕೊಟ್ಟಿದ್ದಾರೆ.
ಉತ್ತಮ ರಸ್ತೆಗೆ ಮತ್ತೆ ಮತ್ತೆ ಕಾಮಗಾರಿ :
ನಗರಸಭೆ ಬಂದಿರುವ SCP ಮತ್ತು TSP ಅನುದಾನವನ್ನು ಉತ್ತಮ ರಸ್ತೆ ಇದ್ದರು ಮತ್ತೆ ಅದೇ ರಸ್ತೆಗೆ ಕಾಮಗಾರಿ ಮಾಡಿ ಹಣದ ದುರ್ಬಳಕೆ ಮಾಡುತ್ತಿದ್ದಾರೆ ಎಂದರು.
ಇಂದಿರಾ ಕ್ಯಾಂಟೀನ್ಗೆ ಗ್ರಾಹಕರಿಲ್ಲದಿದ್ದರು ಲಕ್ಷಗಟ್ಟಲೆ ಬಿಲ್ :
ಉಡುಪಿ ನಗರ ದಲ್ಲಿ 2 ಇಂದಿರಾ ಕ್ಯಾಂಟೀನ್ನಲ್ಲಿ ಪ್ರತೀ ತಿಂಗಳಿಗೆ ಬೆಳಗಿನ ಉಪಾಹಾರ 30,000 ಪ್ಲೇಟ್. ಅಪರಾಹ್ನದ ಊಟ 28,000 ಪ್ಲೇಟ್, ರಾತ್ರಿ ಊಟ ತಲಾ 10,000 ಪ್ಲೇಟ್ ಊಟಕ್ಕೆ ನಕಲಿ ಬಿಲ್ಗಳನ್ನು ತಯಾರಿಸಿ ಕಳಪೆ ಊಟ ನೀಡಿ ಲಕ್ಷಾಂತರ ರೂಪಾಯಿ ಕೊಳ್ಳೆ ಹೊಡೆಯಲಾಗಿದೆ. ಕಳೆದ 2 ವರ್ಷಗಳಲ್ಲಿ 2 ಇಂದಿರಾ ಕ್ಯಾಂಟೀನ್ ಅಂದಾಜು ಬಿಲ್ ರೂ.84 ಲಕ್ಷ ಗಳಷ್ಟಾಗಿವೆ. ಗ್ರಾಹಕರು ಕಳಪೆ ಮಟ್ಟದ ಆಹಾರ ಕೊಡುವ ಬಗ್ಗೆ ದೂರಿದ್ದಾರೆ.
ಪೌರ ಕಾರ್ಮಿಕರನ್ನು ಕೀಳಾಗಿ ಕಾಣುತ್ತಿದೆ ನಗರ ಸಭೆ?
ಪೌರಕಾರ್ಮಿಕರನ್ನು ಬೆದರಿಸುವುದು, ಅದರಲ್ಲೂ ಕೊರಗ ಜನಾಂಗದವರ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದಾರೆ. ಸರ್ಕಾರದಿಂದ ಉಚಿತ ವಾಹನ ನೀಡಿದರೂ ಪ್ರತೀ ತಿಂಗಳು ಕಮಿಷನ್ ನೀಡುವಂತೆ ಒತ್ತಾಯಿಸುತ್ತಿದ್ದಾರೆ, ಎಂದು ಸುಂದರ್ ಮಾಸ್ಟರ್ ದೂರಿದರು.
ನಗರಸಭೆಯಲ್ ಬೇರೆ ಬೇರೇ ಇಲಾಖೆಯ ನೇಮಕಾತಿಯಲ್ಲಿ ನಗರದಲ್ಲಿ ಪ.ಜಾತಿಯವರಿಗಿಂತ ಪ. ಪಂಗಡದವರ ನೇಮಕಾತಿ ಹೆಚ್ಚಾಗಿದೆ. ಒಟ್ಟಾರೆಯಾಗಿ ನೇಮಕಾತಿಯಲ್ಲಿ ಗೋಲ್ ಮಾಲ್ ನಡೆದಿದೆ.
ನಗರಸಭೆಯ ಕಮಿಷನರ್ ಯಾರಿಗೂ ಸರಿಯಾದ ಉತ್ತರ ಕೊಡ್ತಿಲ್ಲ, ಶಾಸಕರನ್ನು ಕೇಳಿ ಎಂಬ ಉತ್ತರ ಸಿಗುತ್ತೆ. ಈ ಬಗ್ಗೆ ಲೋಕಾಯುಕ್ತರಿಂದ ತೀವ್ರ ತನಿಖೆಗೆ ಒಳಪಡಿಸಬೇಕು. ಹಾಗೂ ಆರೋಗ್ಯ ಮತ್ತು ಪರಿಸರ ವಿಭಾಗದಲ್ಲಿ ಅತೀ ಹೆಚ್ಚು ಹಣ ಅವ್ಯವಹಾರವಾಗಿರುವುದರಿಂದ ಪರಿಸರ ಅಧಿಕಾರಿ, ಸ್ನೇಹಾ, ಆರೋಗ್ಯ ಸಿಬಂದಿ ಮನೋಹರ, ಕರುಣಾಕರ ಇವರನ್ನು ಕೂಡಲೇ ಬೇರೆ ಕಡೆಗೆ ವರ್ಗಾಯಿಸಬೇಕು. ತಪ್ಪಿತಸ್ಥರ ಮೇಲೆ ಸೂಕ್ತ ಕ್ರಮ ಜರುಗಿಸಬೇಕು, ಎಂದು ಒತ್ತಾಯಿಸಿದರು
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಸಂಘಟನಾ ಸಂಚಾಲಕರಾದ ಶ್ಯಾಮರಾಜ್ ಬಿರ್ತಿ, ಮಂಜುನಾಥ ಬಾಳ್ಕುದ್ರು, ಭಾಸ್ಕರ್ ಮಾಸ್ತರ್, ಶಂಕರದಾಸ್, ಉಡುಪಿ ತಾಲೂಕು ಸಂಚಾಲಕರು, ವಿಠಲ ಉಚ್ಚಿಲ, ಕಾಪು ತಾಲೂಕು ಸಂಚಾಲಕರು, ಶಿವಾನಂದ ಮೂಡುಬೆಟ್ಟು, ನಗರ ಸಂಚಾಲಕರು, ಎಸ್ ಎಸ್ ಪ್ರಸಾದ್, ರಾಜ್ಯ ಪ್ರಧಾನ ಸಂಚಾಲಕರು ಉಪಸ್ಥಿತರಿದ್ದರು.