ಕಾಸರಗೋಡು, ಅ. 24 (DaijiworldNews/HR): ವಿದ್ಯುತ್ ಸ್ಪರ್ಶದಿಂದ ರಫಾಯಲ್ ಡಿ ಸೋಜ ( 49) ಎಂಬ ಕೃಷಿಕರೋರ್ವರು ಪೈವಳಿಕೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಬಳ್ಳೂರು ನಾರ್ಲಗುಳಿಯಲ್ಲಿ ಮೃತಪಟ್ಟ ಘಟನೆ ನಡೆದಿದೆ.

ರಫಾಯಲ್ ರವರ ಕೃಷಿ ಸ್ಥಳಕ್ಕೆ ಕಾಡು ಹಂದಿಗಳು ನಿರಂತರ ದಾಳಿ ನಡೆಸುತ್ತಿದ್ದು, ಭಾರೀ ಪ್ರಮಾಣದ ಬೆಳೆಗಳು ಹಾನಿಗೊಂಡಿದ್ದವು. ಇದರಿಂದ ಭತ್ತ ಕೃಷಿಗೆ ಕಾಡು ಹಂದಿಗಳ ಉಪಟಳ ತಡೆಯಲು ತಂತಿಯ ಬೇಲಿ ಅಳವಡಿಸಿ ವಿದ್ಯುತ್ ಪ್ರವಹಿಸಲಾಗಿತ್ತು ರಾತ್ರಿ ಹಂದಿಯ ಶಬ್ದ ಕೇಳಿ ಗದ್ದೆಯ ಕಡೆಗೆ ತೆರಳಿದ್ದ ಸಂದರ್ಭದಲ್ಲಿ ಅವರಿಗೆ ವಿದ್ಯುತ್ ಶಾಕ್ ತಗಲಿದ್ದು, ಬೊಬ್ಬೆ ಕೇಳಿ ನೆರೆಮನೆಯವರು ಗಮನಿಸಿದಾಗ ರಫಾಯಲ್ ರವರು ಶಾಕ್ ತಗಲಿ ಬಿದ್ದಿರುವುದು ಕಂಡು ಬಂದಿದೆ.
ಬಳಿಕ ಮಂಜೇಶ್ವರ ಪೊಲೀಸ್ ಠಾಣೆ ಗೆ ಮಾಹಿತಿ ನೀಡಲಾಯಿತು. ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಉಪ್ಪಳ ಅಗ್ನಿಶಾಮಕ ದಳದ ಸಹಾಯಕ ಅಧಿಕಾರಿ ಎ. ಟಿ ಜೋರ್ಜ್ ನೇತೃತ್ವದ ತಂಡವು ತಂತಿಯನ್ನು ತುಂಡರಿಸಿ ಮೃತದೇಹವನ್ನು ಹೊರತೆಗೆದರು.
ಮಂಜೇಶ್ವರ ಠಾಣಾ ಪೊಲೀಸರು ಮಹಜರು ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಾಸರಗೋಡು ಜನರಲ್ ಆಸ್ಪತ್ರೆಗೆ ಕೊಂಡೊಯ್ಯಲಾಯಿತು.