ಉಡುಪಿ, ಅ.24 (DaijiworldNews/PY): ಕೆಮ್ಮಣ್ಣು-ಪಡುಕುದ್ರುವಿಗೆ ಸಂಪರ್ಕಿಸುವ 60 ವರ್ಷಗಳಷ್ಟು ಹಳೆಯದಾದ ಸೇತುವೆಯನ್ನು ತೆರವುಗೊಳಿಸುವಂತೆ ಸ್ಥಳೀಯರು ಸಂಬಂಧಪಟ್ಟ ಅಧಿಕಾರಿಗಳನ್ನು ಕೋರಿದ್ದಾರೆ. ಸೇತುವೆ ಮುರಿದು ಹೋಗಿದ್ದು, ಯಾವುದೇ ಸಮಯದಲ್ಲಿಯೂ ಕೂಡಾ ಕುಸಿಯುವ ಅಂಚಿನಲ್ಲಿದೆ.

ಈ ಸೇತುವೆಯನ್ನು ಕೆಮ್ಮಣ್ಣು-ಪಡುಕುದ್ರು ನಡುವಿನ ಮುಖ್ಯ ಸಂಪರ್ಕ ಸೇತುವೆಯಾಗಿ 60 ವರ್ಷಗಳ ಹಿಂದೆ ನಿರ್ಮಿಸಲಾಗಿದೆ. ಇದಕ್ಕೆ ಪರ್ಯಾಯವಾಗಿ 15 ವರ್ಷದ ಹಿಂದೆ ನೂತನವಾದ ಸೇತುವೆಯನ್ನು ನಿರ್ಮಿಸಲಾಗಿದೆ. ಆದರೆ, ಸಂಬಂಧಪಟ್ಟ ಅಧಿಕಾರಿಗಳು ಹಳೆಯ ಸೇತುವೆಯನ್ನು ತೆರವುಗೊಳಿಸದೇ ಹಾಗೆಯೇ ಬಿಟ್ಟಿದ್ದಾರೆ.
ಸೇತುವೆಯ ಅಡಿಯಲ್ಲಿ ಸಂಚರಿಸುವ ದೋಣಿಗಳಿಗೆ, ನಾವಿಕರ ಪ್ರಾಣಕ್ಕೆ ಅಪಾಯವಿದೆ ಎಂದು ಸ್ಥಳೀಯರು ಹೇಳುತ್ತಾರೆ. ಈ ಸೇತುವೆ 150 ಅಡಿ ಉದ್ದ ಹಾಗೂ ಸುಮಾರು 20 ರಿಂದ 25 ಅಡಿ ಎತ್ತರವಿದೆ. ಈ ನೀರಿನಲ್ಲಿ ಸಣ್ಣ ಮೀನುಗಾರಿಕೆ, ಸರಕು ಸಾಗಣೆ ದೋಣಿಗಳು ಸಾಗುತ್ತವೆ. ಈ ಸೇತುವೆ ಒಂದು ವೇಳೆ ಕುಸಿದಲ್ಲಿ ನೀರು ಹರಿವಿಗೆ ತೊಂದರೆಯಾಗಲಿದೆ ಎಂದು ಸ್ಥಳೀಯರು ಹೇಳುತ್ತಾರೆ.
ಗ್ರಾಮ ಪಂಚಾಯಿತಿ ಪಿಡಿಒ ಕಮಲಾ ಈ ಬಗ್ಗೆ ಮಾತನಾಡಿ, ಈ ಬಗ್ಗೆ ಮಾಹಿತಿಯನ್ನು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ಕೆಮ್ಮಣ್ಣು ಗ್ರಾಮ ಪಂಚಾಯತಿ ನೀಡಿದೆ. ಸಾರ್ವಜನಿಕರ ದೂರಿನ ಆಧಾರದ ಮೇಲೆ ಸೇತುವೆಯನ್ನು ಕೂಡಲೇ ತೆರವುಗೊಳಿಸಬೇಕು ಎಂದು ಪಿಡಬ್ಲ್ಯೂಡಿಗೆ ತಿಳಿಸಿದ್ದೇವೆ. ಅದರಂತೆ ಪಿಡಬ್ಲ್ಯುಡಿಯ ಇಂಜಿನಿಯರ್ ಒಬ್ಬರು ಬಂದು ತಪಾಸಣೆ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.
ಸಂಪೂರ್ಣವಾಗಿ ಕುಸಿದು ಬೀಳುವ ಅಂಚಿನಲ್ಲಿರುವ ಕೆಮ್ಮಣ್ಣು-ಪಡುಕುದ್ರು ಹಳೆಯ ಸೇತುವೆಯನ್ನು ಬೇಗನೆ ತೆರವುಗೊಳಿಸಬೇಕು. ಸೇತುವೆ ಒಮ್ಮೆ ಕುಸಿದು ಬಿದ್ದರೆ, ಸ್ಥಳೀಯ ದೋಣಿ ಸಾಗಾಟಕ್ಕೆ ಹಾಗೂ ತೆರವುಗೊಳಿಸು ಕಾರ್ಯ ಮಾಡಲು ಕಷ್ಟ. ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು ಹಾಗೂ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯ ನಿವಾಸಿ ರಿಚರ್ಡ್ ಕೆಮ್ಮಣ್ಣು ಅವರು ಹೇಳಿದ್ದಾರೆ.