ಕುಂದಾಪುರ, ಅ.24 (DaijiworldNews/PY): ವಂಡ್ಸೆ ಗ್ರಾಮ ಪಂಚಾಯತ್ ಎಸ್.ಎಲ್.ಆರ್.ಎಂ ಯಶಸ್ವಿ ಅನುಷ್ಠಾನದ ಮೂಲಕ ರಾಜ್ಯಕ್ಕೆ ಮಾದರಿಯಾಗಿದೆ. ನೇಪಾಳ, ತಮಿಳುನಾಡು, ಪಶ್ಚಿಮ ಬಂಗಾಳದಿಂದ ಇಲ್ಲಿಗೆ ಅಧ್ಯಯನಕ್ಕೆ ಬಂದಿದ್ದಾರೆ. ಇದರ ಅಧೀನಕ್ಕೆ ಒಳಪಟ್ಟು ಮಹಿಳೆಯರಿಗೆ ವೃತ್ತಿ ಮತ್ತು ತರಬೇತಿಗೆ ಅವಕಾಶ ಮಾಡಿಕೊಟ್ಟಿದ್ದ ಸ್ವಾವಲಂಬನಾ ಕೇಂದ್ರವನ್ನು ಕಾನೂನು ಬಾಹಿರವಾಗಿ ತೆರವು ಮಾಡಿ ಇಷ್ಟು ದಿನ ಕಳೆದರೂ ಆ ಮಹಿಳೆಯರನ್ನು ಕರೆದು ಮಾತನಾಡಿಸಿ, ಪ್ರಕರಣ ಇತ್ಯರ್ಥ ಮಾಡುವ ಕೆಲಸವನ್ನು ಸ್ಥಳೀಯ ಶಾಸಕರು ಇನ್ನೂ ಮಾಡಿಲ್ಲ. ಮಹಿಳೆಯರಿಗೆ ನ್ಯಾಯ ಒದಗಿಸಿಕೊಡುವ ನಿಟ್ಟಿನಲ್ಲಿ ಸರಣಿ ಪ್ರತಿಭಟನೆ ಮುಂದುವರಿಯಲಿದೆ ಎಂದು ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಹೇಳಿದರು.









ರಾಜ್ಯಕ್ಕೆ ಮಾದರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ವಂಡ್ಸೆ ಗ್ರಾಮ ಪಂಚಾಯತ್ನ ಎಸ್.ಎಲ್.ಆರ್.ಎಂ ಘಟಕದ ಅಧೀನ ಸಂಸ್ಥೆಯಾದ ‘ಸ್ವಾವಲಂಬನಾ’ ವೃತ್ತಿ ತರಬೇತಿ ಕೇಂದ್ರವನ್ನು ಕಾನೂನು ಬಾಹಿರವಾಗಿ ತೆರವು ಮಾಡಿರುವುದು ಖಂಡಿಸಿ ಕುಂದಾಪುರ ತಾಲ್ಲೂಕು ಪಂಚಾಯತ್ ರಾಜ್ ಒಕ್ಕೂಟ ಹಾಗೂ ವಿವಿಧ ಸಂಘಟನೆಗಳ ಸಹಕಾರದೊಂದಿಗೆ ಅಂಪಾರಿನಲಿ ನಡೆದ ಸರಣಿ ಸತ್ಯಾಗ್ರಹ ಉದ್ದೇಶಿಸಿ ಮಾತನಾಡಿದರು.
ಉದಯಕುಮಾರ ಶೆಟ್ಟಿಯವರಿಗೆ ಅನಾರೋಗ್ಯ ಕಾಡುತ್ತಿದ್ದರೂ ಕೂಡಾ ತಂಡ ಕಟ್ಟಿಕೊಂಡು ಜಿಲ್ಲಾಡಳಿತ ನೀಡಿದ ಯೋಜನೆಯನ್ನು ಯಶಸ್ವಿಯಾಗಿ ಅನುಷ್ಠಾನ ಮಾಡಿದ್ದರು. ತನ್ನ ಮನೆಯ ಪಕ್ಕದ ಗ್ರಾಮ ರಾಜ್ಯಕ್ಕೆ ಮಾದರಿಯಾಗುತ್ತಿರುವುದನ್ನು ಕಂಡು ಶಾಸಕರು ಸಂತೋಷ ಪಡಬೇಕಿತ್ತು. ಆದರೆ ಅದನ್ನು ಸಹಿಸದೇ ಈ ರೀತಿಯಲ್ಲಿ ಅಧಿಕಾರಿಗಳಿಗೆ ಒತ್ತಡ ಹೇರಿ ತೆರವು ಮಾಡಿಸಿದರು. ಶಾಸಕರು ಸಾರ್ವಜನಿಕ ಜೀವನದಲ್ಲಿ ಯಾವ ರೀತಿ ಇರಬೇಕು ಎನ್ನುವುದನ್ನು ತಿಳಿದುಕೊಳ್ಳಬೇಕು ಎಂದರು.
ಎರಡುವರೆ ವರ್ಷ ಆಗಿದೆ. ಇಲ್ಲಿಯ ತನಕ ನಾನು ನಿಮ್ಮ ವಿಚಾರಕ್ಕೆ ತಲೆ ಹಾಕಿಲ್ಲ. ಈಗ ನೀವು ಮಹಿಳೆಯರ ವಿರುದ್ಧ ನಡೆದುಕೊಂಡಿದ್ದೀರಿ. ಹಾಗಾಗಿ ನಾವು ಮದ್ಯ ಪ್ರವೇಶ ಮಾಡಲೇಬೇಕಾಗುತ್ತದೆ. ನೀವು ಮೊದಲು ನಿಮ್ಮ ಪಾರ್ಟಿಯನ್ನು ಸರಿಯಾಗಿಟ್ಟುಕೊಳ್ಳಿ. ನಂತರ ಇನ್ನೊಬ್ಬರ ಬಗ್ಗೆ ಮಾತನಾಡಿ. ಇವತ್ತಿನಿಂದ ನಿಮ್ಮ ಪಾರ್ಟಿಯ ನಿಷ್ಠಾವಂತ ಕಾರ್ಯಕರ್ತರನ್ನೆ ನಮ್ಮ ಪಕ್ಷಕ್ಕೆ ಸೇರ್ಪಡೆಗೊಳಿಸುವ ಕೆಲಸ ಮಾಡುತ್ತೇವೆ ಎಂದರು
ಉದಯ ಕುಮಾರ ಶೆಟ್ಟಿ ಅವರು ನಿಮ್ಮ ಕರೆಗೆ ಮನ್ನಣೆ ನೀಡಿ ನಿಮ್ಮ ಪಕ್ಷಕ್ಕೆ ಬರಲಿಲ್ಲ ಎನ್ನುವ ಕಾರಣಕ್ಕೆ ಈ ರೀತಿ ದ್ವೇಷ ತೀರಿಸಿಕೊಳ್ಳುತ್ತಿರುವಿರಿ. ಶಾಸಕರೆಂದ ಮೇಲೆ ಇಂದು ಪಕ್ಷಕ್ಕೆ ಶಾಸಕರಲ್ಲ. ಎಲ್ಲರಿಗೂ ಅವರು ಶಾಸಕರು ಎನ್ನುವುದನ್ನು ತಿಳಿದುಕೊಳ್ಳಿ ಎಂದ ಅವರು, ಚುನಾವಣೆಯ ಸಂದರ್ಭದಲ್ಲಿ ಕ್ಷೇತ್ರದಲ್ಲಿ ಮಟ್ಕಾ ಮುಕ್ತ ಮಾಡುತ್ತೇನೆ, ಅಕ್ರಮ ಮದ್ಯ ಮುಕ್ತ ಮಾಡುತ್ತೇನೆ, ಎಂದೆಲ್ಲಾ ಹೇಳಿದಿರಿ. ಈಗ ಏನು ಮಾಡಿದ್ದಿರಿ? ನಿಮ್ಮ ಮನೆಯ ಕಂಪೌಂಡ್ನಲ್ಲಿ ಇಸ್ಪಿಟ್ ಕ್ಲಬ್ ನಡೆಯುತ್ತಿದೆ. ಇದನ್ನು ನಿಮಗೆ ಕಾಣಿಸುತ್ತಿಲ್ಲವೇ ಎಂದು ಅವರು ಪ್ರಶ್ನಿಸಿದರು.
ಸೌಕೂರು ನೀರಾವರಿ ಯೋಜನೆ ತರುವಲ್ಲಿ ಸಭಾಪತಿ, ಪ್ರತಾಪಚಂದ್ರ ಶೆಟ್ಟಿಯವರು, ನಾನು ಹಾಗೂ ಸಂತೋಷ ಶೆಟ್ಟಿ ಸಾಕಷ್ಟು ಶ್ರಮ ವಹಿಸಿದ್ದೇವು. ಆದರೆ ನೀವು ನಿಷ್ಠಾ ಸಭಾಪತಿಗಳ ಹೆಸರನ್ನಾದರೂ ಹೇಳಬಹುದಲ್ಲಾ? ಎಂದು ಪ್ರಶ್ನಿಸಿದ ಅವರು ಬೈಂದೂರು ಕ್ಷೇತ್ರದಲ್ಲಿ ಟೆಂಡರ್ ಹಾಕಬಾರದೆಂದು ಒಬ್ಬರು ವಕೀಲರು ನೋಟಿಸು ಕೊಡುತ್ತಾರೆ ಏಕೆ? ಎಂದು ಪ್ರಶ್ನಿಸಿದರು.
ಉಡುಪಿ ಜಿಲ್ಲಾ ರೈತ ಸಂಘದ ವಕ್ತಾರ ವಿಕಾಸ್ ಹೆಗ್ಡೆ ಮಾತನಾಡಿ, ಮಹಾಭಾರತದ ಯುದ್ಧ ಸಂದರ್ಭದಲ್ಲಿಯೂ ಕೂಡಾ ಸೂರ್ಯಸ್ತದ ನಂತರ ಯುದ್ಧ ಮಾಡಬಾರದು ಎಂಬ ನಿಯಮವಿತ್ತು. ಆದರೆ ಉಡುಪಿ ಜಿ.ಪಂ.ಕಾರ್ಯನಿರ್ವಹಣಾಧಿಕಾರಿ ಸಂಜೆ 6.30ಕ್ಕೆ ಕಾನೂನು ಪ್ರಕಾರ ತೆರವು ಮಾಡುವುದಕ್ಕೆ ಆದೇಶ ಮಾಡುತ್ತಾರೆ. ತಾ.ಪಂ. ಕಾರ್ಯನಿರ್ವಹಣಾಧಿಕಾರಿ, ಗ್ರಾ.ಪಂ.ಆಡಳಿತಾಧಿಕಾರಿ, ಅಭಿವೃದ್ದಿ ಅಧಿಕಾರಿ ಯಮನಿಗಿಂತಲೂ ಕನಿಷ್ಠರು. ಇವತ್ತು ಮಹಿಳೆಯರ ಪರವಾಗಿ ಪ್ರತಿಭಟನೆ ನಡೆಯುತ್ತಿದೆ. ಇದನ್ನು ಹತ್ತಿಕ್ಕಲು ಶಾಸಕರು ಎಲ್ಲ ರೀತಿಯ ಪ್ರಯತ್ನ ಮಾಡುತ್ತಿದ್ದಾರೆ. ತನ್ನ ನಾಲ್ಕಾರು ಹಿಂಬಾಲಕರ ಮೂಲಕ ಸಾಮಾಜಿಕ ಜಾಲಾ ತಾಣದಲ್ಲಿ ವೈಯಕ್ತಿಕ ಟೀಕೆಗಳನ್ನು ಮಾಡಿಸುತ್ತಿದ್ದಾರೆ. ಸಾಮಾಜಿಕ, ರಾಜಕೀಯ ಜೀವನದಲ್ಲಿ ಟೀಕೆ ಟಿಪ್ಪಣಿಗೆ ನಾನು ಹೆದರುವುದಿಲ್ಲ. ಶಾಸಕರ ತಪ್ಪುಗಳನ್ನು ಪ್ರಶ್ನಿಸಲು ಸಂವಿಧಾನ ನನಗೆ ಅವಕಾಶ ನೀಡಿದೆ. ತಪ್ಪು, ಅನ್ಯಾಯ, ಅಕ್ರಮಗಳನ್ನು ಪ್ರಶ್ನಿಸಲು ನಾನು ಹೆದರುವುದಿಲ್ಲ ಎಂದರು.
ಜಿಲ್ಲಾ ಪಂಚಾಯತ್ ಸದಸ್ಯೆ ಜ್ಯೋತಿ ನಾಯಕ್, ಕಾಂಗ್ರೆಸ್ ಮುಖಂಡರಾದ ಸಂಪಿಗೇಡಿ ಸಂಜೀವ ಶೆಟ್ಟಿ, ಬೈಂದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮದನ್ ಕುಮಾರ್, ಕುಂದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ, ವಂಡ್ಸೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರದೀಪಕುಮಾರ್ ಶೆಟ್ಟಿ ಗುಡಿಬೆಟ್ಟು, ಉಡುಪಿ ತಾ.ಪಂ ಸದಸ್ಯೆ ಡಾ.ಸುನೀತಾ ಶೆಟ್ಟಿ, ತಾಲೂಕು ಪಂಚಾಯತ್ ಸದಸ್ಯರಾದ ಜ್ಯೋತಿ ಪುತ್ರನ್, ಉದಯ ಜಿ.ಪೂಜಾರಿ, ವಾಸುದೇವ ಪೈ, ಶೇಖರ ಪೂಜಾರಿ, ಪಂಚಾಯತ್ ರಾಜ್ ಹಕ್ಕೋತ್ತಾಯ ಆಂದೋಲನದ ಶ್ರೀನಿವಾಸ ಗಾಣಿಗ, ಉಡುಪಿ ಜಿಲ್ಲಾ ರೈತ ಸಂಘದ ಕಾವ್ರಾಡಿ ವಲಯಾಧ್ಯಕ್ಷ ಶರತ್ಚಂದ್ರ ಶೆಟ್ಟಿ, ಸಿದ್ಧಾಪುರ ವಲಯಾಧ್ಯಕ್ಷ ಸದಾಶಿವ ಶೆಟ್ಟಿ ಶಂಕರನಾರಾಯಣ ಮೊದಲಾದವರು ಉಪಸ್ಥಿತರಿದ್ದರು.
ಕುಂದಾಪುರ ತಾಲೂಕು ಪಂಚಾಯತ್ ರಾಜ್ ಒಕ್ಕೂಟದ ಅಧ್ಯಕ್ಷ, ವಂಡ್ಸೆ ಗ್ರಾ.ಪಂ.ನಿಕಟಪೂರ್ವ ಅಧ್ಯಕ್ಷ ಉದಯಕುಮಾರ ಶೆಟ್ಟಿ ಧರಣಿ ಸತ್ಯಾಗ್ರಹ ಉದ್ದೇಶಿಸಿ ಮಾತನಾಡಿದರು. ಉಡುಪಿ ಜಿಲ್ಲಾ ರೈತ ಸಂಘದ ಕಾರ್ಯದರ್ಶಿ ಸಂತೋಷ ಶೆಟ್ಟಿ ಬಲಾಡಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿ, ಅ.9 ರಂದು ವಂಡ್ಸೆ ಗ್ರಾಮ ಪಂಚಾಯತ್ ನೇತೃತ್ವದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮಹಿಳಾ ಸ್ವಾವಲಂಬನಾ ಕೇಂದ್ರವನ್ನು ತೆರವು ಗೊಳಿಸಿದ ಅಧಿಕಾರಶಾಹಿ ವಿರುದ್ಧ ಸರಣಿ ಸತ್ಯಾಗ್ರಹ ನಡೆಯುತ್ತಿದೆ. ಸಂತ್ರಸ್ತ ಮಹಿಳೆಯರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಈ ಸತ್ಯಾಗ್ರಹ ನಿರಂತರವಾಗಿ ನಡೆಯುತ್ತಿದೆ ಎಂದರು.