ಕಾಸರಗೋಡು, ಅ.25 (DaijiworldNews/PY): ಪೊಸಡಿಗುಂಪೆಯನ್ನು ಕಾಸರಗೋಡು ಜಿಲ್ಲೆಯ ಪ್ರಧಾನ ಪ್ರವಾಸೋದ್ಯಮ ಕೇಂದ್ರವಾಗಿ ಅಭಿವೃದ್ಧಿಗೊಳಿಸಲಾಗುವುದು ಎಂದು ಕಂದಾಯ ಸಚಿವ ಇ.ಚಂದ್ರಶೇಖರನ್ ತಿಳಿಸಿದರು.








ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅವರೊಂದಿಗೆ ಪೊಸಡಿಗುಂಪೆಗೆ ಭೇಟಿ ನೀಡಿದ ನಂತರ ಅವರು ಈ ಮಾಹಿತಿ ನೀಡಿದರು.
ಪೊಸಡಿಗುಂಪೆ ಅತ್ಯಧಿಕ ಪ್ರವಾಸೋದ್ಯಮ ಸಾಧ್ಯತೆಯಿರುವ ಹಿಲ್ ಸ್ಟೇಷನ್ ಆಗಿದ್ದು, ಪ್ರವಾಸಿಗರನ್ನು ಆಕರ್ಷಿಸುವ ಅನೇಕ ವಿಚಾರಗಳು ಇಲ್ಲಿವೆ. ಪ್ರವಾಸಿಗಳಿಗೆ ಅಗತ್ಯವಿರುವ ಎಲ್ಲ ವ್ಯವಸ್ಥೆಯನ್ನು ಇಲ್ಲಿ ನಡೆಸಬೇಕಿದೆ.1880ರಲ್ಲಿ ಬ್ರಿಟೀಷರು ಸಮೀಕ್ಷೆ ನಡೆಸುವ ಉದ್ದೇಶದಿಂದ ಪೊಸಡಿಗುಂಪೆಯಲ್ಲಿ ಸ್ಥಾಪಿಸಿದ್ದ ಇ.ಟಿ.ಸ್ಟೇಷನ್ ಅನ್ನು ಸಂರಕ್ಷಿತ ಕೇಂದ್ರವಾಗಿಸಲಾಗುವುದು ಎಂದು ಹೇಳಿದರು.
ಬೇಕಲಕೋಟೆಯ ಜೊತೆ ಕಡಲತೀರ ಪ್ರವಾಸೋದ್ಯಮ, ಪೊಸಡಿಗುಂಪೆ, ಮಂಞಂಪೊದಿಕುನ್ನು, ರಾಣಿಪುರಂ, ಕೋಟ್ಟಂಜೇರಿ ಸಹಿತ ಹಿಲ್ ಸ್ಟೇಷನ್ ವಲಯಗಳಲ್ಲಿ ಅಭಿವೃದ್ಧಿ ನಡೆಸುವುದು ರಾಜ್ಯಸರಕಾರದ ಉದ್ದೇಶವಾಗಿದೆ ಎಂದು ತಿಳಿಸಿದರು.
ಬಿ.ಆರ್.ಡಿ.ಸಿ. ಮತ್ತು ಡಿ.ಟಿ.ಪಿ.ಸಿ. ಜಂಟಿಯಾಗಿ ಪ್ರವಾಸೋದ್ಯಮ ಯೋಜನೆಗಳಿಗೆ ರೂಪುರೇಷೆ ನೀಡಲಿವೆ. ಕಣ್ಣೂರು, ಮಂಗಳೂರು ವಿಮಾನ ನಿಲ್ದಾಣಗಳ ಮೂಲಕ ವಿದೇಶಿ ಪ್ರವಾಸಿಗರಿಗೆ ಆಗಮನ ಸುಲಭವಾಗಿದೆ. ನೂತನ ಡೆಸ್ಟಿನೇಷನ್ಗಳು ಕಾಸರಗೋಡು ಜಿಲ್ಲೆಯ ಪ್ರವಾಸೋದ್ಯಮ ಕ್ಷೇತ್ರಗಳಿಗೆ ಹುರುಪು ನೀಡಲಿವೆ ಎಂದವರು ಅಭಿಪ್ರಾಯಪಟ್ಟರು
ಜಿಲ್ಲೆಯ ಅತ್ಯಂತ ಎತ್ತರದ ಗಿರಿಶಿಖರ ಪೊಸಡಿಗುಂಪೆ. ಪೈವಳಿಕೆ ಸಮೀಪದ ಬಾಯಾರು ಧರ್ಮತ್ತಡ್ಕ ಪರಿಸರದಲ್ಲಿ ವಿಸ್ತರಿಸಿರುವ ಬೆಟ್ಟವಾಗಿದ್ದು. ಈ ಸ್ಥಳಕ್ಕೆ ಕಾಸರಗೋಡು - ಮಂಗಳೂರು ರಾಷ್ಟ್ರೀಯ ಹೆದ್ದಾರಿ ಮೂಲಕ ಆಗಮಿಸಿ ಉಪ್ಪಳ ಅಥವಾ ಬಂದ್ಯೋಡು ದಾರಿಯಾಗಿ ತಲಪಬಹುದಾಗಿದೆ.
ಪ್ರಕೃತಿ ಮಾತೆ ಅತ್ಯಂತ ಶೃಂಗರಯುತವಾಗಿ ಕಂಗೊಳಿಸುವ ಪರಿಸರವಿದು. ಚಾರಣಿಗರಿಗೆ ಚಾರಣಧಾಮವಾಗಿ, ಕವಿ ಕಲಾವಿದರಿಗೆ ಸ್ಫೂರ್ತಿಯಾಗಿ, ಧರ್ಮ ಚಿಂತಕರಿಗೆ ಆಧ್ಯಾತ್ಮದ ಸವಿಯನ್ನು ನೀಡುವ ಈ ಶಿಖರ, ಸಿನಿಮಾ ಚಿತ್ರೀಕರಣಕ್ಕೂ ಸೂಕ್ತವಾಗಿದೆ.
ವಿವಿಧ ಗಾತ್ರದ ಪ್ರಾಚೀನ ಗುಹೆಗಳು, ಸುರಂಗಗಳು, ಬಾವಿಗಳಿವೆ. ಶೇಡಿ ಗುಹೆಯು ಮಹತ್ವದ ಧಾರ್ಮಿಕ ಸ್ಥಳವಾಗಿದೆ. ವರ್ಷಕ್ಕೊಮ್ಮೆ ತೀರ್ಥ ಅಮಾವಾಸ್ಯೆಯ ಮುಂಜಾನೆ ಗುಹೆಯಿಂದ ಪವಿತ್ರ ವಿಭೂತಿ ಸಂಗ್ರಹಿಸಲಾಗುತ್ತದೆ. ಗುಡ್ಡದ ತುದಿಯಲ್ಲಿ ನಿಂತು ಪೂರ್ವಕ್ಕೆ ತಿರುಗಿದಾಗ ಕುದುರೆಮುಖ, ಕುಮಾರ ಪರ್ವತ ಕಾಣುತ್ತದೆ. ಪಶ್ಚಿಮಕ್ಕೆ ತಿರುಗಿದರೆ ಅರಬ್ಬಿ ಸಮುದ್ರ ಕಣ್ಣಿಗೆ ಮುದ ನೀಡುತ್ತದೆ.