ಬಂಟ್ವಾಳ, ಅ.25 (DaijiworldNews/PY): ಇಲ್ಲಿನ ಪುರಸಭಾ ವ್ಯಾಪ್ತಿಯ ಭಂಡಾರಿಬೆಟ್ಟು ವಸತಿ ಸಂಕೀರ್ಣದಲ್ಲಿ ಹತ್ಯೆಯಾದ ತುಳು ಚಲನಚಿತ್ರ ನಟ, ರೌಡಿಶೀಟರ್ ಸುರೇಂದ್ರ ಬಂಟ್ವಾಳ್ ಅವರ ಹತ್ಯೆ ಪ್ರಕರಣದ ಪ್ರಮುಖ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಬಂಟ್ವಾಳ ನಿವಾಸಿ ಸತೀಶ್ ಕುಲಾಲ್ ಹಾಗೂ ಕಿನ್ನಿಗೋಳಿ ನಿವಾಸಿ ಬಂಧಿತ ಆರೋಪಿಗಳು.
ಅಕ್ಟೋಬರ್ 24 ರ ಶನಿವಾರ ರಾತ್ರಿ ಇಬ್ಬರು ಆರೋಪಿಗಳು ಕಾಸರಗೋಡಿನಿಂದ ಬಾಡಿಗೆ ವಾಹನದಲ್ಲಿ ಬಂಟ್ವಾಳಕ್ಕೆ ತೆರಳುತ್ತಿದ್ದರು. ಅವರ ಚಲನೆಯ ಬಗ್ಗೆ ಮಾಹಿತಿ ಪಡೆದ ಬಂಟ್ವಾಳ ಡಿವೈಎಸ್ಪಿ ವೆಟೆಂಟೆನ್ ಡಿಸೋಜ ಅವರ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿದ್ದು, ಆರೋಪಿಗಳನ್ನು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ.
ಅಕ್ಟೋಬರ್ 20 ರ ರಾತ್ರಿ ಪುರಸಭಾ ವ್ಯಾಪ್ತಿಯ ಭಂಡಾರಿಬೆಟ್ಟು ವಸತಿ ಸಂಕೀರ್ಣದಲ್ಲಿ ವಾಸವಿದ್ದ ಸುರೇಂದ್ರ ಅವರ ಫ್ಲಾಟ್ಗೆ ಪ್ರವೇಶಿಸಿದ್ದು, ಅವರ ಹತ್ಯೆಗೈದಿದ್ದರು. ನಂತರ ಅಕ್ಟೋಬರ್ 21 ರಂದು ಸ್ನೇಹಿತರು ಸುರೇಂದ್ರ ಅವರ ಮೊಬೈಲ್ ಫೋನ್ಗೆ ಕರೆ ಮಾಡಿದ್ದ ಸಂದರ್ಭ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಈ ಬಗ್ಗೆ ಅನುಮಾನಗೊಂಡ ಸುರೇಂದ್ರ ಅವರ ಸ್ನೇಹಿತರು ಈ ವಿಷಯವನ್ನು ಪೊಲೀಸರಿಗೆ ತಿಳಿಸಿದ್ದರು. ಫ್ಲಾಟ್ಗೆ ಬಂದು ನೋಡಿದಾಗ ಸುರೇಂದ್ರ ಅವರನ್ನು ಹತ್ಯೆಗೈದಿರುವ ಘಟನೆ ಬೆಳಕಿಗೆಬಂದಿದೆ.
ಬಳಿಕ ಸಿಸಿಟಿವಿ ಕ್ಯಾಮೆರಾವನ್ನು ಪರಿಶೀಲಿಸಿದಾ ಹಿಂದಿನ ರಾತ್ರಿ ಇಬ್ಬರು ವ್ಯಕ್ತಿಗಳು ಫ್ಲಾಟ್ಗೆ ಪ್ರವೇಶಿಸಿರುವುದು ಕಂಡುಬಂದಿದೆ. ಅನುಮಾನದ ಮೇರೆಗೆ ಪೊಲೀಸರು ಆರೋಪಿ ಸತೀಶ್ ಕುಲಾಲ್ ಅವರ ಮೊಬೈಲ್ಗೆ ಕರೆ ಮಾಡಿದಾಗ ಅವರ ಮೊಬೈಲ್ ಸ್ವಿಚ್ ಆಫ್ ಆಗಿರುವುದು ಕಂಡುಬಂದಿದೆ.
ಇನ್ನು ಆರೋಪಿ ಸತೀಶ್ ಕುಲಾಲ್ ಪೊಲೀಸರಿಗೆ ಕಳುಹಿಸಿರುವ ವಾಯ್ಸ್ ಮೆಸೇಜ್ನಲ್ಲಿ, ''ನಾನು ಸುರೇಂದ್ರನೊಂದಿಗೆ 22 ವರ್ಷಗಳಿಂದ ಇದ್ದೇನೆ. ಆತನ ಎಲ್ಲಾ ಅವ್ಯವಹಾರಗಳು ನನಗೆ ತಿಳಿದಿದೆ. ಸುರೇಂದ್ರ ಕಿಶನ್ ಹೆಗ್ಡೆ ಕೊಲೆಗೆ ಹಣದ ಸಹಾಯ ಮಾಡಿದ್ದ. ಇದು ಉಡುಪಿಯ ಕಿಶನ್ ಹೆಗ್ಡೆ ಹತ್ಯೆಗೆ ಪ್ರತೀಕಾರ'' ಎಂದು ತಿಳಿಸಿದ್ದರು
''ಸುರೇಂದ್ರ ಕಿಶನ್ ಹೆಗ್ಡೆ ಕೊಲೆಗಾಗಿ ಹಣ ಸಹಾಯ ಮಾಡಿದಾಗ ನಾನು ಬೇಡವೆಂದು ಹೇಳಿದ್ದೆ. ಆಗ ನನ್ನನ್ನೇ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದ. ನಾನು ಕಿಶನ್ ಹೆಗ್ಡೆ ಸ್ನೇಹಿತನ ಜೊತೆ ಸೇರಿ ಕೊಲೆ ಮಾಡಿದ್ದೇನೆ. ಎರಡು ದಿನದಲ್ಲಿ ಪೊಲೀಸರ ಮುಂದೆ ಶರಣಾಗುತ್ತೇವೆ'' ಎಂದಿದ್ದರು.