ಮಂಗಳೂರು, ಅ.25 (DaijiworldNews/PY): ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನದ ಅಭಿವೃದ್ಧಿಯ ರೂವಾರಿ, ಮಾಜಿ ಕೇಂದ್ರ ಸಚಿವ ಬಿ.ಜನಾರ್ಧನ ಪೂಜಾರಿ ಅವರು ಅ.24ರ ಶನಿವಾರದಂದು ಮಂಗಳೂರು ದಸರಾ ಉತ್ಸವವನ್ನು ದೇವಾಲಯದ ಆವರಣದಲ್ಲಿ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.









ಈ ವೇಳೆ ಮಾತನಾಡಿದ ಅವರು, ಗೋಕರ್ಣನಾಥನ ಆಶೀರ್ವಾದದಿಂದ ಅನೇಕ ವರ್ಷಗಳಿಂದ ಮಂಗಳೂರು ದಸರಾವನ್ನು ಭವ್ಯವಾಗಿ ಆಚರಿಸಲಾಗುತ್ತಿದೆ. ನಮಗೆಲ್ಲರಿಗೂ ಅವರ ಆಶೀರ್ವಾದ ಬೇಕು ಎಂದರು.
ಕೊರೊನಾವನ್ನು ತಡೆಗಟ್ಟಲು ರಾಜ್ಯ ಸರ್ಕಾರ ನಿಯಮಗಳನ್ನು ರೂಪಿಸಿದೆ. ನಾವು ಆಡಳಿತದೊಂದಿಗೆ ಸಹಕರಿಸಬೇಕು. ಸರ್ಕಾರದ ನಿರ್ದಿಷ್ಟಪಡಿಸಿದ ಕೊರೊನಾ ನಿಯಮಗಳ ಮಿತಿಯೊಳಗೆ ಮಂಗಳೂರು ದಸರಾವನ್ನು ಆಚರಿಸಲು ದೇವಾಲಯದ ನಿರ್ವಾಹಣಾ ಮಂಡಳಿಯಿಂದ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದು ಹೇಳಿದರು.
ಮಂಗಳೂರು ದಸರಾ ಮಹೋತ್ಸವದ ಅಂಗವಾಗಿ ಈ ಬಾರಿಯ ದಸರಾ ಶೋಭಾಯಾತ್ರೆಯ ಬದಲಾಗಿ ಬ್ರಹ್ಮಶ್ರೀ ನಾರಾಯಣ ಗುರುಗಳ ಭಾವಚಿತ್ರವನ್ನು ಸಾಂಕೇತಿಕವಾಗಿ ರಾಜ ಬೀದಿಯಲ್ಲಿ ಸೋಮವಾರದಂದು ನಗರ ಪ್ರದಕ್ಷಿಣೆ ನಡೆಸಲು ಕ್ಷೇತ್ರದ ಆಡಳಿತ ಮಂಡಳಿ ತೀರ್ಮಾನ ಕೈಗೊಂಡಿದೆ.
ದೇವಾಲಯದ ಅಧ್ಯಕ್ಷ ಎಚ್.ಎಸ್.ಸಾಯಿರಾಂ, ಕಾರ್ಯದರ್ಶಿ ಬಿ.ಮಾಧವ ಸುವರ್ಣ, ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡುಬಿದಿರೆ, ಕೋಶಾಧಿಕಾರಿ ಪದ್ಮರಾಜ್ ಆರ್, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ರಾಮ್ದಾಸ್, ಕಾರ್ಪೋರೇಟರ್ ಸುಧೀರ್ ಶೆಟ್ಟಿ, ಅನಿಲ್ ಪೂಜಾರಿ ಹಾಘೂ ಯೋಗೀಶ್ ಮುಲ್ಕಿ ಉಪಸ್ಥಿತರಿದ್ದರು.