ಉಡುಪಿ, ಅ. 25 (DaijiworldNews/HR): ಅನುಮಾನಸ್ಪದ ರೀತಿಯಲ್ಲಿ ಯುವತಿ ಸಾವನ್ನಪ್ಪಿದ ಘಟನೆ ಉಡುಪಿಯ ಆಸ್ಪತ್ರೆಯೊಂದರಲ್ಲಿ ನಡೆದಿದ್ದು,ಯುವತಿಯ ಸಾವಿನ ಕುರಿತು ಆಕೆಯ ಮನೆಯವರು ಸಂಶಯ ವ್ಯಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದೆ.



ಯುವತಿಯು 24 ವರ್ಷದ ಯುವಕನೊಂದಿಗೆ ಆರರಿಂದ ಏಳು ತಿಂಗಳುಗಳವರೆಗೆ ಲಿವ್ ಇನ್ ರಿಲೇಷನ್ ಶಿಪ್ ಸಂಬಂಧದಲ್ಲಿದ್ದಳು. ಯುವಕನು ಇಂಟೀರಿಯರ್ ಡಿಸೈನರ್ ಆಗಿ ಕೆಲಸ ಮಾಡುತ್ತಿದ್ದು, ಆತನಿಗೆ ಈ ಮೊದಲೆ ಮದುವೆಯಾಗಿದ್ದು ಯುವತಿಯಿಂದ ಮದುವೆಯ ವಿಷಯ ಮುಚ್ಚಿಟ್ಟಿದ್ದ ಎಂದು ಮೂಲಗಳು ತಿಳಿಸಿವೆ.
ಅವನ ಮೊದಲ ಮದುವೆಯ ಬಗ್ಗೆ ತಿಳಿದ ಬಳಿಕ ಯುವತಿಯು ಖಿನ್ನತೆಗೆ ಒಳಗಾಗಿದ್ದಳು. ಆಕೆಯನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆಕೆ ಆಸ್ಪತ್ರೆಯಲ್ಲಿ ಮೃತಪಟ್ಟ ನಂತರ ನಿಗೂಢವಾಗಿ ಯುವಕ ಕಣ್ಮರೆಯಾಗಿದ್ದು, ಆತನ ಮೊಬೈಲ್ ಫೋನ್ ಸಹ ಸ್ವಿಚ್ ಆಫ್ ಆಗಿದೆ.
ಇನ್ನು ಯುವತಿ ಮತ್ತು ಯುವಕನ ಪತ್ನಿಯ ನಡುವೆ ಜಗಳ ಕೂಡ ನಡೆದಿತ್ತು ಎಂದು ಮೂಲಗಳು ತಿಳಿಸಿವೆ.
ಯುವತಿ ಬಿಸಿಎ ಪದವೀಧರರಾಗಿದ್ದು, ಘಟನೆಯ ಬಗ್ಗೆ ಸಮಗ್ರ ತನಿಖೆ ನಡೆಸಬೇಕೆಂದು ಕುಟುಂಬ ಸದಸ್ಯರು ಒತ್ತಾಯಿಸಿದ್ದಾರೆ.
ಈ ಸಂಬಂಧ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಎಲ್ಲಾ ಕೋನಗಳಿಂದ ತನಿಖೆ ನಡೆಸಲಾಗುವುದು ಎಂದು ನಗರ ಪೊಲೀಸ್ ಠಾಣೆಯ ಎಸ್ಐ ಶಕ್ತಿವೇಲು ಮಾಹಿತಿ ನೀಡಿದ್ದಾರೆ.