ಬೆಂಗಳೂರು, ಮೇ 25 : ಕಪ್ಪು ಬಣ್ಣದ ಶರ್ಟ್, ಸೈನಿಕರ ಮಾದರಿಯ ಪ್ಯಾಂಟ್ ಹಾಗೂ ಕ್ಯಾಪ್ ಧರಿಸಿದ್ದ ಮಹಿಳಾ ಕಾನ್ಸ್ಟೆಬಲ್ಗಳು, ಲಾಠಿ ಹಿಡಿದು ಸದ್ದು ಮಾಡುವ ಈ ವೀರ ವನಿತೆಯರು ‘ಓಬವ್ವ ಪಡೆ" ಯವರು. ಇದು ಮಹಿಳೆಯರ ಮೇಲಿನ ದೌರ್ಜನ್ಯಗಳನ್ನು ತಡೆಯಲು ಹಾಗೂ ಅವರಿಗೆ ಸೂಕ್ತ ರಕ್ಷಣೆ ಒದಗಿಸಲೆಂದು ರಚಿಸಿದ ಪಡೆ ಸದ್ಯ ಇದು ಪ್ರಾಯೋಗಿಕವಾಗಿ ಪ್ರಾರಂಭವಾಗಿದೆ. ಇದನ್ನು ಹುಟ್ಟು ಹಾಕಿದವರು ಬೆಂಗಳೂರು ಪಶ್ಚಿಮ ವಿಭಾಗದ ಪೊಲೀಸರು.
ಎಲ್ಲಿಯಾದರೂ ಯುವತಿಯರನ್ನು ಚುಡಾಯಿಸುವವರು ಕಂಡರೆ ತಕ್ಷಣಕ್ಕೆ ಮಾಹಿತಿ ನೀಡುವಂತೆ ಸಾರ್ವಜನಿಕರನ್ನು ಕೋರಿದ ಒಬವ್ವ ಪಡೆ, ಒಂದು ವೇಳೆ ಇಂತಹ ರೋಡ್ ರೋಮಿಯೋಗಳು, ಕಾಮುಕರು ಕಂಡು ಬಂದರೆ ಅವರನ್ನು ವಶಕ್ಕೆ ಪಡೆಯುವ ಭರವಸೆಯನ್ನು ನೀಡಿದ್ದಾರೆ. ಸದ್ಯ ಈ ಓಬವ್ವ ಪಡೆಯಲ್ಲಿ ಮಹಿಳಾ ಪಿಎಸ್ಐ ಸೇರಿದಂತೆ ಎಂಟು ಮಹಿಳಾ ಸಿಬ್ಬಂದಿ ಇರಲಿದ್ದಾರೆ. ಅವರೆಲ್ಲರೂ ಠಾಣೆ ವ್ಯಾಪ್ತಿಯ ಪ್ರದೇಶಗಳಲ್ಲಿ ನಿರಂತರವಾಗಿ ಗಸ್ತು ತಿರುಗಲಿದ್ದಾರೆ.ಮಹಿಳೆಯರು ಅಪಾಯಕ್ಕೆ ಸಿಲುಕಿದ್ದ ಬಗ್ಗೆ ಮಾಹಿತಿ ಬರುತ್ತಿದ್ದಂತೆ ಪಡೆಯ ಸಿಬ್ಬಂದಿ ಸ್ಥಳಕ್ಕೆ ಹೋಗಲಿದ್ದಾರೆ.
ಒಂದು ವೇಳೆ ಉತ್ತಮ ಸ್ಪಂದನೆ ವ್ಯಕ್ತವಾದರೆ ಉಳಿದ ಠಾಣೆಗಳ ವ್ಯಾಪ್ತಿಗೂ ವಿಸ್ತರಿಸುವ ಯೋಚನೆ ಇಲಾಖೆಗಿದೆ.