ಬೆಂಗಳೂರು , ಮೇ 25: ಕರ್ನಾಟಕ ವಿಧಾನಸಭೆಯ 21 ನೇ ಸ್ಪೀಕರ್ ಆಗಿ ಹಿರಿಯ ಕಾಂಗ್ರೆಸ್ ನ ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದ ಶಾಸಕ ರಮೇಶ್ ಕುಮಾರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಕೊನೆ ಕ್ಷಣದಲ್ಲಿ ಬಿಜೆಪಿಯ ಸುರೇಶ್ ಕುಮಾರ್ ಅವರು ನಾಮಪತ್ರ ವಾಪಸ್ ಪಡೆದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದ ರಮೇಶ್ ಕುಮಾರ್ ಅವರು ಸ್ಪೀಕರ್ ಆಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಈ ಹಿಂದೆ ಬಿಜೆಪಿ ಶಾಸಕ ಸುರೇಶ್ ಕುಮಾರ್ ಹಾಗೂ ಕಾಂಗ್ರೆಸ್ನ ರಮೇಶ್ ಕುಮಾರ್ ವಿಧಾನಸಭೆ ಸ್ಪೀಕರ್ ಸ್ಥಾನಕ್ಕಾಗಿ ನಾಮಪತ್ರ ಸಲ್ಲಿಸಿದ್ದರು. ಆದರೆ ಕೊನೆ ಕ್ಷಣದಲ್ಲಿ ಕಾರ್ಕಳ ಶಾಸಕ ಸುನೀಲ್ ಕುಮಾರ್ ಅವರು, ಸ್ಪೀಕರ್ ಸ್ಥಾನಕ್ಕೆ ಸುರೇಶ್ ಕುಮಾರ್ ಅವರನ್ನು ಸೂಚಿಸುತ್ತಿಲ್ಲ ಎಂದು ಹೇಳಿದ ಕಾರಣ ರಮೇಶ್ ಕುಮಾರ್ ಅವರು ಸರ್ವಾನುಮತದಿಂದ ಆಯ್ಕೆಯಾದರು.
ಬಳಿಕ ಆಯ್ಕೆಯಾದ ನೂತನ ಸ್ಪೀಕರ್ ಕೆ.ಆರ್ ರಮೇಶ್ ಕುಮಾರ್ ಅವರನ್ನು ಹಾಲಿ ಸಿ.ಎಂ ಹೆಚ್.ಡಿ ಕುಮಾರಸ್ವಾಮಿ ಹಾಗೂ ವಿರೋಧ ಪಕ್ಷದ ವಿಧಾನಸಭಾ ನಾಯಕ ಬಿ.ಎಸ್ ಯಡಿಯೂರಪ್ಪ ಸಭಾಪೀಠಕ್ಕೆ ಕರೆದುಕೊಂಡು ಹೋದರು. ತದನಂತರ ನೂತನ ಸ್ಪೀಕರ್ ರಮೇಶ್ ಕುಮಾರ್ ಅವರು ಸ್ಪೀಕರ್ ಪೀಠವನ್ನು ಅಲಂಕರಿಸಿದರು.