ಉಡುಪಿ, ಅ. 25 (DaijiworldNews/HR): ಕಳೆದ 3 ದಿನಗಳಿಂದ ಮನೆಯಲ್ಲಿ ವಾಸಿಸಲು ಹೆದರಿ ಸಿಟಿ ಬಸ್ ನಿಲ್ದಾಣದಲ್ಲಿ ಅಸಹಾಯಕ ಪರಿಸ್ಥಿತಿಯಲ್ಲಿ ನೊಂದು ಮರುಗುತ್ತಿದ್ದ ಜಲಜ ಆಚಾರ್ತಿ(50ವ) ಮಹಿಳೆಯನ್ನು ವಿಶು ಶೆಟ್ಟಿ ಅಂಬಲಪಾಡಿ ಮಹಿಳಾ ಪೊಲೀಸರ ಸಹಾಯದಿಂದ ರಕ್ಷಿಸಿ ತುರ್ತು ನೆಲೆಗಾಗಿ ಸಖಿ ಒನ್ ಸ್ಟಾಪ್ ಸೆಂಟರ್ ಗೆ ದಾಖಲಿಸಿದ ಘಟನೆ ಭಾನುವಾರ ಸಂಜೆ ನಡೆದಿದೆ.

ಮಹಿಳೆಯ ಪತಿ ತೀರಿಹೋಗಿದ್ದು ಹೆಣ್ಣು ಮಕ್ಕಳಿಗೆ ಮದುವೆ ಆಗಿದೆ. ಒಬ್ಬಂಟಿಯಾಗಿ ಮನೆಯಲ್ಲಿ ವಾಸಿಸಲು ಹೆದರಿ ಬೀದಿಗಿಳಿದೆ. ನನಗೆ ಆಸರೆ ಹಾಗೂ ರಕ್ಷಣೆ ಕೊಡಿ ಎಂದು ಮಹಿಳೆ ಅಳಲು ತೀಡಿಕೊಂಡಿದ್ದಾರೆ. ಮಹಿಳೆಯು ಬ್ರಹ್ಮಾವರ ಠಾಣಾ ವ್ಯಾಪ್ತಿಯವರಾಗಿದ್ದು ಪತಿಯ ಮನೆ ಕುಂಜಾಲು ಹಾಗೂ ತನ್ನ ಮನೆ ಉಪ್ಪೂರಿನಲ್ಲಿದೆ ಎಂದು ತಿಳಿಸಿದ್ದಾರೆ.
ಸಂಬಂಧಿಕರು ಸಖಿ ಒನ್ ಸ್ಟಾಪ್ ಸೆಂಟರ್ ಹಾಗೂ ಮಹಿಳಾ ಪೊಲೀಸ್ ಠಾಣೆ ಸಂಪರ್ಕಿಸಬೇಕಾಗಿ ವಿಶು ಶೆಟ್ಟಿ ಅಂಬಲಪಾಡಿಯವರು ವಿನಂತಿಸಿದ್ದಾರೆ.
ಇನ್ನು ಮಹಿಳೆಯ ಕಿವಿಯಲ್ಲಿ ಚಿನ್ನದ ಓಲೆ ಇದ್ದು ದುಷ್ಕರ್ಮಿಯೋರ್ವ ರಾತ್ರಿ ಹೊತ್ತು ಓಲೆ, ರೂ.2000 ನಗದು ಹಾಗೂ ಮೊಬೈಲ್ ನ್ನು ಬಲವಂತವಾಗಿ ದೋಚಿದ್ದಾನೆ ಎಂದು ಮಹಿಳೆ ದುಃಖಿತಳಾಗಿ ಹೇಳಿದ್ದಾರೆ. ಓಲೆ ಎಳೆಯುವಾಗ ಕಿವಿಯಲ್ಲಿ ರಕ್ತವೂ ಬಂದಿತ್ತು.