ಮಂಗಳೂರು, ಅ. 26 (DaijiworldNews/SM): ರಾಜ್ಯದಲ್ಲೇ ಮೈಸೂರು ಬಳಿಕ ಎರಡನೇ ಅತೀ ದೊಡ್ಡ ದಸರಾ ಎಂದು ಕರೆಸಿಕೊಳ್ಳುವ ಮಂಗಳೂರು ದಸರಾ ‘ನಮ್ಮ ದಸರಾ ನಮ್ಮ ಸುರಕ್ಷತೆ ಎಂಬ ಧ್ಯೇಯದೊಂದಿಗೆ ಕೊರೋನಾ ಕಾರಣದಿಂದಾಗಿ ಸರಳವಾಗಿ ಆಚರಿಸಲಾಗಿದ್ದು, ಉತ್ಸವಕ್ಕೆ ಇಂದು ರಾತ್ರಿ ತೆರೆ ಬೀಳುತ್ತಿದೆ.

ನವರಾತ್ರಿಯ ಒಂಬತ್ತು ದಿನಗಳ ಕಾಲ ಕುದ್ರೋಳಿ ಗೋಕರ್ಣನಾಥ ಕ್ಷೇತ್ರದಲ್ಲಿ ನವದುರ್ಗೆಯ ಮೂರ್ತಿಗಳಿಗೆ ವಿಶೇಷ ಪೂಜೆ ಸಲ್ಲಿಸಲಾಗಿತ್ತು. ಇದೀಗ ಆರಾಧನೆಗೊಂಡ ನವದುರ್ಗೆಯರ ಮೂರ್ತಿಯ ಜಲಸ್ತಂಭನಾ ಕಾರ್ಯಕ್ರಮ ನಡೆಯುತ್ತಿದೆ. ಕೋವಿಡ್ ಗೈಡ್ಲೈನ್ಸ್ ಪ್ರಕಾರ ಅತ್ಯಂತ ಸರಳವಾಗಿ ಈ ಬಾರಿ ದಸರಾ ಉತ್ಸವ ನೆರವೇರಿದೆ.
ಈ ಹಿಂದಿನ ವರ್ಷಗಳಲ್ಲಿ ಕುದ್ರೋಳಿ ಗೋಕರ್ಣನಾಥ ದೇವಸ್ಥಾನದಲ್ಲಿ ಆರಾಧನೆಗೊಂಡ ನವದುರ್ಗೆಯರ ಶೋಭಾಯಾತ್ರೆ ನಡೆಯುತ್ತಿತ್ತು. ಅದರ ಜೊತೆಗೆ ಅದ್ದೂರಿ ಟ್ಯಾಬ್ಲೋ ಮೂಲಕ ನಗರ ಪ್ರದಕ್ಷಿಣೆ ನಡೆದು ಮುಂಜಾನೆ ವೇಳೆಗೆ ದೇವಳದ ಕೆರೆಯಲ್ಲಿ ವಿಸರ್ಜನೆ ಮಾಡಲಾಗುತ್ತಿತ್ತು. ಆದರೆ, ಈ ಬಾರಿ ಎಲ್ಲವೂ ಬದಲಾಗಿದೆ.
ಕೊರೋನಾ ಕಾರಣದಿಂದ ಮೆರವಣಿಗೆಯನ್ನು ರದ್ದುಗೊಳಿಸಲಾಗಿದೆ. ದೇವಸ್ಥಾನದಲ್ಲೇ ವಿಸರ್ಜನಾ ಪೂಜೆ ನೆರವೇರಿಸಲಾಗಿದೆ. ಹಾಗೂ ದೇವಸ್ಥಾನದ ಹೊರಾಂಗಣದಲ್ಲೇ ಪ್ರದಕ್ಷಿಣೆ ಹಾಕಿ ಕ್ಷೇತ್ರದ ಪುಷ್ಕರಣಿಯಲ್ಲಿ ವಿಸರ್ಜಿಸಲಾಗುತ್ತದೆ.