ಕಾರವಾರ, ಮೇ 26: ಗೋವುಗಳ ಸ್ವಚ್ಛಂದ ಸಾಮ್ರಾಜ್ಯ ಗೋಸ್ವರ್ಗವು ಮೇ27 ರಂದು ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲ್ಲೂಕಿನ ಭಾನ್ಕುಳಿಯಲ್ಲಿ ಲೋಕಾರ್ಪಣೆಗೊಳ್ಳಲಿದೆ ಎಂದು ರಾಘವೇಶ್ವರ ಭಾರತೀ ಮಹಾಸ್ವಾಮೀಜಿ ಹೇಳಿದ್ದಾರೆ.
ಗೋಸ್ವರ್ಗದ ಕುರಿತು ಮಾಹಿತಿ ನೀಡಿದ ಅವರು, ಗೋವು ಸ್ವತಂತ್ರವಾಗಿ ಬದುಕಬೇಕು. ಅವುಗಳಿಗೆ ಒಳ್ಳೆಯ ಬದುಕನ್ನು ನೀಡಬೇಕು. ದೇಶಿಯ ಗೋತಳಿಗಳು ಉಳಿಯಬೇಕು. ಕಸಾಯಿಖಾನೆಗೆ ತೆರಳುವ ಗೋವುಗಳ ರಕ್ಷಣೆ ಆಗಬೇಕು ಎನ್ನುವ ಉದ್ದೇಶ ನಮ್ಮದಾಗಿದ್ದು, ಇದಕ್ಕೆ ಎಲ್ಲ ಕಡೆಯಿಂದಲೂ ಉತ್ತಮ ಸ್ಪಂದನೆ ದೊರಕುತ್ತಿದೆ ಎಂದು ಹೇಳಿದ್ದಾರೆ.
ನಿರ್ಮಾಣವಾಗಿರುವ ಗೋ ಸ್ವರ್ಗದಲ್ಲಿ ಗೋವುಗಳನ್ನು ನೋಡಿಕೊಳ್ಳುವುದಕ್ಕೆ ಗೋಪಾಲಕರು ಇದ್ದಾರೆ. ಅಲ್ಲದೇ ಅವುಗಳ ಆರೋಗ್ಯ ದೃಷ್ಟಿಯಿಂದ ಸುಸಜ್ಜಿತವಾದ ಗೋ ಆಸ್ಪತ್ರೆಯನ್ನು ಇಲ್ಲಿ ತೆರೆಯಲಾಗುತ್ತದೆ. ಗೋಸ್ವರ್ಗವು ಸಂಪೂರ್ಣ ಗೋಸೌಖ್ಯ ಕೇಂದ್ರವಾಗಿದೆ. ಆರಂಭದಲ್ಲಿ ಒಂದು ಸಾವಿರ ಗೋವುಗಳಿಂದ ಆರಂಭಿಸಲಾಗುತ್ತಿದ್ದು, ಅವುಗಳಿಗೆ ಇದೊಂದು ಸ್ವಚ್ಛಂದ ಸಾಮ್ರಾಜ್ಯವಾಗಿದೆ. ಗೋವುಗಳಿಗೆ ಬೇಕಾದ ಪರಿಶುದ್ಧವಾದ ಆಹಾರ ಇಲ್ಲಿ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.
ಭಾರತೀಯ ಗೋತಳಿಗಳನ್ನು ಉಳಿಸುವುದೇ ಗೋಸ್ವರ್ಗದ ಮುಖ್ಯ ಉದ್ದೇಶವಾಗಿದೆ. ಗೋವುಗಳು ಸ್ವತಂತ್ರವಾಗಿ ವಿಹರಿಸಬೇಕು. ಅವುಗಳದ್ದು ನರಕ ಯಾತನೆಯ ಜೀವನ ಆಗಬಾರದು. ಗೋಸ್ವರ್ಗ ಹಾಗೂ ಗೋಶಾಲೆಯ ಅವಶ್ಯಕತೆ ಎಲ್ಲೆಡೆಯೂ ಇದೆ. ಜಿಲ್ಲೆಯ ಮತ್ತಿತರ ಕಡೆಗಳಲ್ಲಿ ಹಾಗೂ ಅವಶ್ಯ ಇರುವಲ್ಲಿ ಗೋಸ್ವರ್ಗ ನಿರ್ಮಾಣ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಮೇ 27ರಂದು ಮಾತೆ ಗೋವಿನ ಉಳಿವಿಗಾಗಿ ನಡೆಯುವ ಐತಿಹಾಸಿಕ ಕಾರ್ಯಕ್ರಮದಲ್ಲಿ ಗೋ ಪ್ರೇಮಿಗಳೆಲ್ಲರೂ ಪಾಲ್ಗೊಳ್ಳಬೇಕು ಎಂದು ಶ್ರೀರಾಮಚಂದ್ರಾಪುರಮಠದ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ ವಿನಂತಿಸಿದ್ದಾರೆ.