ಬೆಂಗಳೂರು, ಮೇ 26: ಬಿಜೆಪಿ ಪಕ್ಷದ ಯಾವುದೇ ಒತ್ತಡ ಹಾಗೂ ಬೆದರಿಕೆ ತಂತ್ರಕ್ಕೆ ಕಾಂಗ್ರೆಸ್ ಬಗ್ಗುವುದಿಲ್ಲ ಎಂದುಕಾಂಗ್ರೆಸ್ ಹಿರಿಯ ನಾಯಕ ಡಿ. ಕೆ. ಶಿವಕುಮಾರ್ ಹೇಳಿದ್ದಾರೆ.
ಕುಮಾರಸ್ವಾಮಿ ನೇತೃತ್ವದ ಜೆಡಿಎಸ್ -ಕಾಂಗ್ರೆಸ್ ಮೈತ್ರಿ ಸರ್ಕಾರ 24 ಗಂಟೆಯೊಳಗೆ ರಾಜ್ಯದ ರೈತರ ಸಾಲ ಮನ್ನಾ ಮಾಡದಿದ್ದರೆ ಸೋಮವಾರ ಕರ್ನಾಟಕ ಬಂದ್ ಆಚರಿಸುವುದಾಗಿ ವಿಧಾನಸಭೆ ಪ್ರತಿಪಕ್ಷ ನಾಯಕ ಬಿ.ಎಸ್. ಯಡಿಯೂರಪ್ಪ ಹೇಳಿದ್ದರು. ಈ ಹೇಳಿಕೆಗೆ ಕಾಂಗ್ರೆಸ್ ಹಿರಿಯ ನಾಯಕ ಡಿ. ಕೆ. ಶಿವಕುಮಾರ್ ತಿರುಗೇಟು ನೀಡಿದ್ದಾರೆ.
ಸಾಲ ಮನ್ನಾ ಮಾಡಬೇಕೆಂಬ ಬಿಜೆಪಿಯ ಒತ್ತಡ ಹಾಗೂ ಬೆದರಿಕೆ ತಂತ್ರಕ್ಕೆ ಕಾಂಗ್ರೆಸ್ ಬಗ್ಗುವುದಿಲ್ಲ. ನಾವು ನಮ್ಮ ಸರ್ಕಾರಕ್ಕೆ ಜವಾಬ್ದಾರರಾಗಿರುತ್ತೇವೆ. ಆದರೆ ಬಿಜೆಪಿಗೆ ಒಳಿತಾಗಲಿ ಎಂದು ವರ್ತಿಸುವುದಿಲ್ಲ. ಬಿಜೆಪಿಯ ಯಾವುದೇ ತಂತ್ರಕ್ಕೂ ಹೆದರಲ್ಲ ಎಂದು ತಿಳಿಸಿದ್ದಾರೆ.
ಬಿಜೆಪಿ ಸಾರ್ವಜನಿಕ ಹಣವನ್ನು ಪೋಲು ಮಾಡುವುದಿಲ್ಲ ಎಂಬ ನಂಬಿಕೆ ಇದೆ. ಒಂದು ವೇಳೆ ಬಂದ್ ನಡೆದು ಕಾನೂನು ಸುವ್ಯವಸ್ಥೆಗೆ ಧಕ್ಕೆ ಬಂದು, ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಹಾನಿ ಉಂಟಾದರೆ ಅದರ ಹೊಣೆಯನ್ನು ಬಿಜೆಪಿಯೇ ಹೊರಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.