ಉಡುಪಿ, ಅ. 27 (DaijiworldNews/HR): ಗಂಭೀರ ಸ್ಥಿತಿಯಲ್ಲಿದ್ದ ಯುವತಿಯನ್ನು ಆಸ್ಪತ್ರೆಗೆ ದಾಖಲಿಸಿ ಆಕೆ ಕೊನೆಯುಸಿರೆಳೆಯುವ ಮುನ್ನ ತಪ್ಪಿಸಿಕೊಂಡ ಆರೋಪಿ ಪ್ರಿಯಕರನನ್ನು ಪೊಲೀಸರು ಪತ್ತೆ ಹಚ್ಚಿ ಬಂಧಿಸಿದ್ದಾರೆ.

ಹಿರಿಯಡ್ಕ ಪೊಲೀಸ್ ಠಾಣೆ ವ್ಯಾಪ್ತಿಯ ಕುಕ್ಕೇಹಳ್ಳಿ ಗ್ರಾಮದ ದ್ವಿತೀಯ ವರ್ಷದ ಬಿಕಾಂ ಪದವಿ ವಿದ್ಯಾರ್ಥಿನಿ ರಕ್ಷಿತಾ ನಾಯಕ್ ಅಕ್ಟೋಬರ್ 24 ರಂದು ರಾತ್ರಿ ಇಲ್ಲಿನ ಗಾಂಧಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಕೊಲ್ಲೂರು ಬಳಿಯ ಜಡ್ಕಲ್ ಮೂಲದ ಪ್ರಶಾಂತ್ ಕುಂದರ್ ಎಂಬಾತ ಆಕೆಯನ್ನು ಆಟೋ ರಿಕ್ಷಾದಲ್ಲಿ ಆಸ್ಪತ್ರೆಗೆ ಕರೆತಂದು ಸ್ಟ್ರೆಚರ್ಗೆ ವರ್ಗಾಯಿಸಿದ ಬಳಿಕ ನಾಪತ್ತೆಯಾಗಿದ್ದನು. ಯುವತಿಯನ್ನು ಆಸ್ಪತ್ರೆಗೆ ದಾಖಲಿಸಿರುವ ಬಗ್ಗೆ ಆತ ಯುವತಿಯ ಮನೆಯವರಿಗೂ ತಿಳಿಸಿದ್ದಾನೆ, ಆ ಬಳಿಕ ಆತ ತನ್ನ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ನಾಪತ್ತೆಯಾಗಿದ್ದನು.
ತಮ್ಮ ಮಗಳು ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದಾಳೆ ಎಂದು ರಕ್ಷಿತಾ ಅವರ ಹೆತ್ತವರು ದೂರು ನೀಡಿದ್ದರು. ಪ್ರಕರಣವನ್ನು ಕೈಗೆತ್ತಿಕೊಂಡ ಪೊಲೀಸರು ಸೋಮವಾರ ಪ್ರಶಾಂತ್ ಕುಂದರ್ ನನ್ನು ವಶಕ್ಕೆ ಪಡೆದಿದ್ದಾರೆ.
ರಕ್ಷಿತಾ ಅವರ ಮರಣೋತ್ತರ ಪರೀಕ್ಷೆಯನ್ನು ಭಾನುವಾರ ರಾತ್ರಿ ನಡೆಸಲಾಗಿದ್ದು, ರಕ್ಷಿತಾಳ ದೇಹದಲ್ಲಿ ಆಲ್ಕೋಹಾಲ್ ಅಂಶ ಹಾಗೂ ಆಕೆಯ ಕುತ್ತಿಗೆ ರಕ್ತ ಹೆಪ್ಪುಗೆಟ್ಟಿದ ಗುರುತುಗಳು ಪತ್ತೆಯಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಪ್ರಶಾಂತ್ ಕುಂದರ್ ಗೆ ಈಗಾಗಲೇ ಮದುವೆಯಾಗಿತ್ತು ಎಂದು ಹೇಳಲಾಗುತ್ತಿದೆ. ಆದರೂ, ರಕ್ಷಿತಾ ಅವರೊಂದಿಗೆ ಏಳೆಂಟು ತಿಂಗಳಿನಿಂದ ಲಿವ್ ಇನ್ ರಿಲೇಶನ್ ಶಿಪ್ ನಲ್ಲಿ ಒಟ್ಟಿಗೆ ಇದ್ದರು. ಆದರೆ ಯುವತಿ ಸಾವಿನ ರಹಸ್ಯ ಇನ್ನೂ ಬಯಲಾಗಿಲ್ಲ.