ಮಂಗಳೂರು, ಅ. 27 (DaijiworldNews/MB) : ಹಿಂದೂ ಮಹಾಸಭಾ ಕರ್ನಾಟಕ ಘಟಕವು ಹಿಂದಿ ಚಲನಚಿತ್ರ 'ಲಕ್ಷ್ಮಿ ಬಾಂಬ್' ಅನ್ನು ನಿಷೇಧಿಸುವಂತೆ ಒತ್ತಾಯಿಸಿದ್ದು ಈ ಚಲನಚಿತ್ರ ಬಹುಸಂಖ್ಯಾತ ಹಿಂದೂಗಳ ಭಾವನೆಗಳಿಗೆ ಧಕ್ಕೆ ಉಂಟು ಮಾಡುತ್ತದೆ ಮತ್ತು ಲವ್ ಜಿಹಾದ್ನ್ನು ಪ್ರಚೋದಿಸುತ್ತದೆ ಎಂದು ಆರೋಪಿಸಿದೆ.


ಅಕ್ಟೋಬರ್ 27 ರ ಮಂಗಳವಾರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅಖಿಲ ಭಾರತ ಹಿಂದೂ ಮಹಾಸಭಾ ಪ್ರಾದೇಶಿಕ ಕಾರ್ಯದರ್ಶಿ ಧರ್ಮೇಂದ್ರ ಅವರು, ''ಅಕ್ಷಯ್ ಕುಮಾರ್ ಅಭಿನಯದ 'ಲಕ್ಷ್ಮಿ ಬಾಂಬ್' ಚಲನಚಿತ್ರ ನವೆಂಬರ್ 9 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ. ಈ ಚಿತ್ರಕ್ಕೆ ಉದ್ದೇಶಪೂರ್ವಕವಾಗಿ ಲಕ್ಷ್ಮಿ ದೇವಿಯ ಹೆಸರನ್ನು ಇಟ್ಟು ದೀಪಾವಳಿ ಹಬ್ಬದ ಸಂದರ್ಭದಲ್ಲಿ ಚಲನಚಿತ್ರವನ್ನು ಬಿಡುಗಡೆ ಮಾಡುವ ಸಂಚು ಹೂಡಲಾಗಿದೆ. ಅತ್ಯಂತ ಪೂಜ್ಯ ಹಿಂದೂ ದೇವತೆಯಾದ ಲಕ್ಷ್ಮಿ ಹೆಸರನ್ನು ಇಟ್ಟಿರುವುದು ಹಿಂದೂಗಳ ಭಾವನೆಗೆ ಘಾಸಿ ಉಂಟು ಮಾಡಿದೆ'' ಎಂದು ಹೇಳಿದರು.
"ಮುಖ್ಯ ಪಾತ್ರದಲ್ಲಿರುವ ನಟಿಯ ಹೆಸರು 'ಪ್ರಿಯಾ ಯಾದವ್' ಮತ್ತು ನಾಯಕ 'ಆಸಿಫ್'. ಮುಸ್ಲಿಂ ಯುವಕ ಮತ್ತು ಹಿಂದೂ ಹುಡುಗಿಯ ನಡುವೆ ಪ್ರೇಮ ಸಂಬಂಧವನ್ನು ತೋರಿಸುವ ಮೂಲಕ ಅದು 'ಲವ್ ಜಿಹಾದ್' ಅನ್ನು ಉದ್ದೇಶಪೂರ್ವಕವಾಗಿ ಬೆಂಬಲಿಸುತ್ತದೆ. ಈ ಕಾರಣದಿಂದಾಗಿ ಈ ಚಲನಚಿತ್ರಕ್ಕೆ ನಿಷೇಧ ಹೇರಬೇಕು" ಎಂದು ಹಿಂದೂ ಮಹಾಸಭಾ ಒತ್ತಾಯಿಸಿದೆ.
ಈ ಚಲನಚಿತ್ರದಲ್ಲಿ ನಟ ಅಕ್ಷಯ್ ಕುಮಾರ್ ತೃತೀಯ ಲಿಂಗಿಯಂತೆ ವರ್ತಿಸಿರುವುದು ಟ್ರೈಲರ್ನಲ್ಲಿ ಕಂಡು ಬಂದಿದೆ. ಅವರು ಕೆಂಪು ಸೀರೆ, ಉದ್ದ ಕೂದಲು, ಹಣೆಯ ಮೇಲೆ ದೊಡ್ಡ ಕೆಂಪು ಬಿಂದಿಯನ್ನು ಅಕ್ಷಯ್ ಹಾಕಿದ್ದು ಕೈಯಲ್ಲಿ ತ್ರಿಶೂಲ ಹಿಡಿದು ನೃತ್ಯ ಮಾಡಿರುವುದು ಕಾಣಬಹುದಾಗಿದೆ. ಇದು ಹಿಂದೂ ದೇವತೆಯನ್ನು ಹಾಸ್ಯ ಮಾಡಿದಂತಿದೆ. ಅಷ್ಟೇ ಅಲ್ಲದೇ ತೃತೀಯ ಲಿಂಗಿಗಳನ್ನು ಅವಮಾನಿಸುವಂತಿದೆ. ಈ ಚಿತ್ರದ ನಿರ್ಮಾಪಕರು ಶಬಿನಾ ಖಾನ್ ಹಾಗೂ ಚಿತ್ರ ಕಥೆಗಾರ ಫರ್ಹಾನ್ ಅವರು ಚಲನಚಿತ್ರದಲ್ಲಿ ಕೋಮು ದ್ವೇಷವನ್ನು ಉದ್ದೇಶಪೂರ್ವಕವಾಗಿ ಪ್ರಚೋದಿಸಿದ್ದಾರೆ'' ಎಂದು ಆರೋಪಿಸಿದ್ದಾರೆ.
''ಲಿಪ್ಸ್ಟಿಕ್ ಅಂಡರ್ ಮೈ ಬುರ್ಖಾ ಮತ್ತು ದಿ ಡಾ ವಿನ್ಸಿ ಕೋಡ್ ಬಿಡುಗಡೆಯಾದಾಗ, ಮುಸ್ಲಿಂ ಮತ್ತು ಕ್ರಿಶ್ಚಿಯನ್ ಸಮುದಾಯದ ಧಾರ್ಮಿಕ ಭಾವನೆಗಳನ್ನು ನೋಯಿಸಿದ್ದಕ್ಕಾಗಿ ಚಲನಚಿತ್ರಗಳಿಗೆ ತಡೆಯೊಡ್ಡಲಾಗಿದೆ. ಹಿಂದೂ ಸಮುದಾಯವನ್ನು ಯಾಕೆ ಹೀನವಾಗಿ ಪರಿಗಣಿಸಲಾಗುತ್ತದೆ ಹಾಗೂ ಯಾಕೆ ಹಿಂದೂ ಭಾವನೆಗಳನ್ನು ನೋಯಿಸುವಂತಹ ಚಲನಚಿತ್ರಗಳನ್ನು ನಿರ್ಮಿಸಲಾಗುತ್ತದೆ'' ಎಂದು ಪ್ರಶ್ನಿಸಿದ್ದಾರೆ. ಹಾಗೆಯೇ ''ಸೆನ್ಸಾರ್ ಬೋರ್ಡ್ ಸಹ ಈ ಪಿತೂರಿಯಲ್ಲಿ ಭಾಗಿಯಾಗಿದೆ ಎಂದು ನಾವು ಭಾವಿಸುತ್ತೇವೆ. ಚಿತ್ರ ಬಿಡುಗಡೆಯಾಗಬೇಕಾದರೆ, ಕೆಲವು ಆಕ್ಷೇಪಾರ್ಹ ದೃಶ್ಯಗಳನ್ನು ಅಳಿಸಬೇಕು, ಚಿತ್ರವನ್ನು ಮರುಪರಿಶೀಲಿಸಬೇಕಾಗಿದೆ'' ಎಂದು ಅವರು ಹೇಳಿದರು.
ರಾಜ್ಯ ಸಂಚಾಲಕ ಜಗನ್ ಕುಮಾರ್ ಮಾತನಾಡಿ, ''ಚಲನಚಿತ್ರ ನಿರ್ಮಾಪಕರು ತಮ್ಮ ಚಿತ್ರಗಳಿಗೆ 'ಫಾತಿಮಾ ಬಾಂಬ್' ತಸೀಮಾ ಬಾಂಬ್ 'ಇತ್ಯಾದಿ ಹೆಸರಿಟ್ಟು ಈದ್ ಸಮಯದಲ್ಲಿ ಬಿಡುಗಡೆ ಮಾಡಲು ಧೈರ್ಯವಿದೆಯೇ ಎಂದು ಮಹಾಸಭಾ ತಿಳಿಯಲು ಬಯಸಿದೆ. ಇದು ಹಿಂದೂಗಳ ವಿರುದ್ಧ ಪಕ್ಷಪಾತವಲ್ಲವೇ'' ಎಂದು ಪ್ರಶ್ನಿಸಿದರು.
''ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಹಿಂದೂ ಮಹಾಸಭಾ ಸಮಾನ ಹಿಂದೂ ಸಂಘಟನೆಗಳೊಂದಿಗೆ ಸೇರಿ ಅನ್ಯಾಯದ ವಿರುದ್ಧ ಹೋರಾಡಲಿದೆ'' ಎಂದು ಎಚ್ಚರಿಸಿದರು.
ಜಿಲ್ಲಾಧ್ಯಕ್ಷ ಧನರಾಜ್ ಪೂಜಾರಿ, ಮಂಗಳೂರು ದಕ್ಷಿಣ ಕ್ಷೇತ್ರದ ಅಧ್ಯಕ್ಷ ಅಕ್ಷತ್ ಶೆಟ್ಟಿ, ವಸಂತ್ ಅಮೀನ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಜೀರ್ ಶೆಟ್ಟಿ ಉಪಸ್ಥಿತರಿದ್ದರು.