ಉಡುಪಿ, ಅ. 27 (DaijiworldNews/MB) : ''ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ, ಸಾಂಸ್ಕೃತಿಕ ಹಾಗೂ ಉದ್ಯಮ ಕ್ಷೇತ್ರಗಳಲ್ಲಿ ವೈವಿಧ್ಯತೆಯನ್ನು ಹೊಂದಿರುವ ಅನೇಕತೆಯಲ್ಲಿ ಏಕತೆಯ ಸಂಕೇತವಾಗಿರುವ ಉಡುಪಿಯಲ್ಲಿ ಯಾವುದೇ ಹಠಾವೋ ಅಭಿಯಾನಗಳು ಸಮಂಜಸವಲ್ಲ'' ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಹೇಳಿದ್ದಾರೆ.



ಅವರು ಮಂಗಳವಾರ ಬಿಜೆಪಿ ಕಚೇರಿಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಪಡೆಯುತ್ತಿರುವ 'ಮಾರ್ವಾಡಿ ಹಠಾವೋ' ಎಂಬ ಅಭಿಯಾನದ ಬಗ್ಗೆ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ, 'ಏಕ್ ಭಾರತ್ ಶ್ರೇಷ್ಠ ಭಾರತ್' ಎಂಬ ಪ್ರಧಾನಿ ನರೇಂದ್ರ ಮೋದಿ ಪರಿಕಲ್ಪನೆಯಂತೆ ದೇಶದೆಲ್ಲೆಡೆ ವಿವಿಧ ಸಮುದಾಯಗಳ ಜನತೆ ವಿವಿಧ ರಾಳ್ಳಿಗಳಲ್ಲಿ ಯಶಸ್ವಿ ಉದ್ಯಮವನ್ನು ನಡೆಸಿಕೊಂಡು ಸ್ವಾವಲಂಬನೆಯ ಚಿಂತನೆಯ ಜೊತೆಗೆ ರಾಷ್ಟ್ರದ ಆರ್ಥಿಕತೆಗೆ ವಿಶೇಷ ಕೊಡುಗೆ ನೀಡುತ್ತಿದ್ದಾರೆ. ದೇಶದ ನಾಗಲಕನೊಬ್ಬ ದೇಶದ ಯಾವುದೇ ಪ್ರದೇಶಗಳಲ್ಲಿ ಜೀವನೋಪಾಯ ಹಾಗೂ ಅಭಿವೃದ್ಧಿಗಾಲ ವ್ಯವಹಾರ ನಡೆಸಲು ಅವಕಾಶವಿದೆ. ಉಡುಪಿ ಜಿಲ್ಲೆಯ ಸಾವಿರಾರು ಮಂದಿ ದೇಶ-ವಿದೇಶಗಳಲ್ಲಿ ವ್ಯವಹಾರ ನಡೆಸುತ್ತಿದ್ದಾರೆ. ಉಡುಪಿಯಾದ್ಯಂತ ಉದ್ಯಮ ನಡೆಸುತ್ತಿರುವ ವಿವಿಧ ರಾಜ್ಯಗಳ ವ್ಯವಹಾರಸ್ಥರಿಗೆ `ಮಾರ್ವಾಡಿ ಹಠಾವೊ' ಎಂಬ ರೀತಿಯ ಅಭಿಯಾನಗಳ ಮೂಲಕ ತೊಂದರೆ ಕೊಡುವುದನ್ನು ಬಿಜೆಪಿ ಖಂಡಿಸುತ್ತದೆ. ಇಂತಹ ಯಾವುದೇ ಅನಪೇಕ್ಷಿತ ಹೇಳಿಕೆಗಳು ಅಥವಾ ಚಟುವಟಿಕೆಗಳನ್ನು ಬಿಜೆಪಿ ಖಂಡಿಸುತ್ತದೆ ಎಂದು ಹೇಳಿದರು.
'ಸಬ್ಕಾ ಸಾಥ್ ಸಬಾ ವಿಕಾಸ್' ಎಂಬ ದೇಶವಾಸಿಗಳೆಲ್ಲರೂ ಒಂದಾಗಿ ಸಮೃದ್ಧಿಯ ಸಹಬಾಳ್ವೆ ನಡೆಸುವ ತತ್ವದಲ್ಲಿ ನಂಬಿಕೆ ಇರಿಸಿರುವ ಬಿಜೆಪಿ ಜಿಲ್ಲೆಯ ಯಾವುದೇ ವ್ಯವಹಾರಸ್ಥರನ್ನು ಗುರಿಯಾಗಿಸಿ ಯಾವುದೇ ವ್ಯಕ್ತಿ ಅಥವಾ ಗುಂಪು ನೀಡುವ ಅಸಂಬದ್ಧ ಪೊಳ್ಳು ಬೆದರಿಕೆಗಳಿಗೆ ಸೊಪ್ಪು ಹಾಕುವುದಿಲ್ಲ. ಜಿಲ್ಲೆಯ ಯಾವುದೇ ಉದ್ದಿಮೆ ಅಥವಾ ವ್ಯವಹಾರಸ್ಥರು ಅನಗತ್ಯ ಗೊಂದಲಕ್ಕೀಡಾಗುವ ಅಗತ್ಯವಿಲ್ಲ. ಬಿಜೆಪಿ ಜಿಲ್ಲೆಯ ಎಲ್ಲ ವರ್ಗದ ವೃವಹಾರಸ್ಥರ ಜೊತೆಯೂ ಇದೆ. ಈ ಹಿಂದೆಯೂ ಉಡುಪಿಯಲ್ಲಿ ಬೇರೆ ಬೇರೆ ರಾಜ್ಯಗಳ ವ್ಯವಹಾರಸ್ಥರಿಗೆ ತೊಂದರೆಯುಂಟಾದ ಸಂದರ್ಭದಲ್ಲಿಯೂ ಬಿಜೆಪಿ ಧೈರ್ಯ ತುಂಬಿದೆ. ಇಂತಹ ಪ್ರಾದೇಶಿಕವಾರು ಕ್ಷುಲ್ಲಕ ಹೇಳಿಕೆಗಳು ದೇಶದ ಏಕತೆಗೆ ಮಾರಕವಾಗಿವೆ. ಎಲ್ಲರೂ ಜಿಲ್ಲೆ ಹಾಗೂ ದೇಶದ ಅಖಂಡತೆ, ಏಕತೆ ಮತ್ತು ಸಮಗ್ರತೆಗೆ ತಮ್ಮದೇ ಆದ ಕೊಡುಗೆ ನೀಡುವುದು ಇಂದಿನ ಅಗತ್ಯತೆ ಎಂದು ಕುಯಿಲಾಡಿ ಹೇಳಿದ್ದಾರೆ.
ಅಕ್ಟೊಬರ್ 29 ಕುಂದಾಪುರದಲ್ಲಿ ಚುನಾವಣೆ ನಡೆಯಲಿದೆ. ಕಾಪುವಿನ ಸ್ಥಳೀಯ ಆಡಳಿತದಲ್ಲಿ ಮಾತ್ರ ಬಿಜೆಪಿಗೆ ಮೀಸಲಾತಿ ಸ್ಥಾನ ಅವಕಾಶ ಸಿಕ್ಕಿಲ್ಲ. ಉಳಿದೆಲ್ಲ ಕಡೆ ಬಿಜೆಪಿಗೆ ಅಧ್ಯಕ್ಷ - ಉಪಾಧ್ಯಕ್ಷ ಸ್ಥಾನ ಸಿಗುತ್ತದೆ. ಎರಡೂವರೆ ವರ್ಷ ಅಧಿಕಾರವಿಲ್ಲದೆ ಸ್ಥಳೀಯಾಡಳಿತ ತಟಸ್ಥವಾಗಿತ್ತು. ಮುಂದಿನ ದಿನಗಳಲ್ಲಿ ಅಭಿವೃದ್ಧಿ ಕಾಮಗಾರಿಗಳು ಇನ್ನಷ್ಟು ಚುರುಕು ಪಡೆದುಕೊಳ್ಳುತ್ತವೆ. ಕಳೆದ ಬರಿ 154 ಗ್ರಾಮ ಪಂಚಾಯತ್ತಿನಲ್ಲಿ ೧೦೨ ನ್ನು ಗ್ರಾಮ ಪಂಚಾಯಿತಿಯಲ್ಲಿ ಬಿಜೆಪಿ ಗೆದ್ದು ಕೊಂಡಿದೆ. ಈ ಬರಿ 130 ಕ್ಕೂ ಹೆಚ್ಚು ಪಂಚಾಯತ್ನ್ನು ಗೆಲ್ಲುವ ಗುರಿ ಇದೆ. ಜಿಲ್ಲೆಯಲ್ಲಿ ಬಿಜೆಪಿ ಇನ್ನಷ್ಟು ಭದ್ರವಾಗಲಿದೆ. ಇದೇ ಬರುವ ನವೆಂಬರ್ - ಡಿಸೆಂಬರ್ನಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಯಲಿದೆ. ಸ್ಥಳೀಯ ಗ್ರಾಮಾಂತರ ಮಟ್ಟದಲ್ಲಿ ಅಭ್ಯರ್ಥಿಗಳ ಆಯ್ಕೆ ಚರ್ಚೆಯಾಗುತ್ತಿದೆ ಎಂದು ಅವರು ಹೇಳಿದರು.
ವೀಣಾ ಶೆಟ್ಟಿ, ಜಿಲ್ಲಾ ಅಧ್ಯಕ್ಷೆ ಬಿಜೆಪಿ, ಗುರುಪ್ರಸಾದ್, ಜಿಲ್ಲಾ ಬಿಜೆಪಿ ವಕ್ತಾರ, ಶಿವಕುಮಾರ್ ಅಂಬಲ್ಪಾಡಿ, ಸಹವಕ್ತಾರರು, ಶ್ರೀನಿಧಿ ಹೆಗ್ಡೆ, ಮಾಧ್ಯಮ ಸಂಚಾಲಕರು ಉಪಸ್ಥಿತರಿದ್ದರು.