ಮಂಗಳೂರು, ಅ. 27 (DaijiworldNews/MB) : ಸಂಗೀತಾ ಕ್ಷೇತ್ರಕ್ಕೆ ನೀಡಿದ ಅಮೂಲ್ಯ ಕೊಡುಗೆಗಳನ್ನು ಗಣನೆಗೆ ತೆಗೆದುಕೊಂಡು ಪ್ರಸಿದ್ಧ ಗಾಯಕಿ ಅನಿತಾ ಡಿಸೋಜಾ ಅವರನ್ನು ಕಾರ್ವಾಲ್ ಕುಟುಂಬ ಹಾಗೂ ಮಾಂಡ್ ಸೊಭಾಣ್ ನೀಡುವ 16 ನೇ ಕಲಾಕಾರ್ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ.

ಅನಿತಾ ಅವರು ಕೊಂಕಣಿ, ಕನ್ನಡ, ತುಳು, ಮಲಯಾಳಂ, ಇಂಗ್ಲಿಷ್, ಹಿಂದಿ, ಗುಜರಾತಿ, ತೆಲುಗು, ತಮಿಳು, ಮರಾಠಿ, ಅರೇಬಿಕ್, ಬ್ಯಾರಿ ಸೇರಿದಂತೆ ಒಟ್ಟು 12 ಭಾಷೆಗಳಲ್ಲಿ ಹಾಡಿದ್ದಾರೆ. ಭಾರತ ಮತ್ತು ಕೊಲ್ಲಿ ರಾಷ್ಟ್ರಗಳಲ್ಲಿ ನಡೆದ 3,000 ಕ್ಕೂ ಹೆಚ್ಚು ಕಾರ್ಯಕ್ರಮಗಳಲ್ಲಿ ಹಾಡಿದ್ದಾರೆ. ಹಾಗೆಯೇ ಚಲನಚಿತ್ರಗಳಿಗೆ ಹಿನ್ನೆಲೆ ಹಾಡಿಗೆ ತಮ್ಮ ಧ್ವನಿ ನೀಡಿದ್ದಾರೆ. ಅವರು ತಮ್ಮದೇ ಆದ ಯಾದ್ ಹಾಗೂ ಕಲರ್ಸ್ ಧ್ವನಿ ಸುರುಳಿಯನ್ನು ಹೊರತಂದಿದ್ದಾರೆ. ವಿವಿಧ ಧ್ವನಿಸುರುಳಿಗಳಲ್ಲಿ 500 ಕ್ಕೂ ಅಧಿಕ ಹಾಡುಗಳನ್ನು ಹಾಡಿದ್ದಾರೆ.
ಅವರ ಪ್ರತಿಭೆ ಮತ್ತು ಸಂಗೀತಾ ಕ್ಷೇತ್ರಕ್ಕೆ ಅವರು ನೀಡಿದ ಕೊಡುಗೆಗಳನ್ನು ಗುರುತಿಸಿ ಕೇರಳ ಸರ್ಕಾರ ಅವರಿಗೆ 'ಕಲತಿಲಕ' ಎಂಬ ಬಿರುದನ್ನು ನೀಡಿ ಗೌರವಿಸಿದರೆ, ಕರ್ನಾಟಕ ಬ್ಯಾರಿ ಅಕಾಡೆಮಿ 'ತುಳುನಾಡ ಗಾನ ಕೋಗಿಲೆ (2006)' ಎಂಬ ಬಿರುದನ್ನು ನೀಡಿ ಗೌರವಿಸಿದೆ. ಮಾಂಡ್ ಸೊಭಾಣ್ ಅನಿತಾ ಡಿಸೋಜಾ ಅವರಿಗೆ ಜಾಗತಿಕ ಕೊಂಕಣಿ ಸಂಗೀತ ಪ್ರಶಸ್ತಿ, ಅತ್ಯುತ್ತಮ ಗಾಯಕಿ (2014) ಪ್ರಶಸ್ತಿ ನೀಡಿ ಪುರಸ್ಕರಿಸಿತ್ತು.
ಅನಿತಾ ಅವರು ಕೂಳೂರು ಮೂಲದವರಾಗಿದ್ದು ಪ್ರಸ್ತುತ ಅಬುಧಾಬಿಯಲ್ಲಿ ವಾಸಿಸುತ್ತಿದ್ದಾರೆ. ಕೊಂಕಣಿ ಗಾಯನ ಕ್ಷೇತ್ರವನ್ನು ಶ್ರೀಮಂತಗೊಳಿಸುವಲ್ಲಿ ಅವರು ನೀಡಿದ ಕೊಡುಗೆಯನ್ನು ಗುರುತಿಸಿ, ಮೇಲಿನ ಪ್ರಶಸ್ತಿಗೆ ಅವರನ್ನು ಆಯ್ಕೆ ಮಾಡಲಾಗಿದೆ.
ಕೊರೊನಾ ಕಾರಣದಿಂದಾಗಿ ಈ ಕಾರ್ಯಕ್ರಮ ಅಬುಧಾಬಿಯಲ್ಲಿ ನಡೆಯಲಿದ್ದು ಉದ್ಯಮಿ ಲಿಯೋ ರೊಡ್ರಿಗಸ್ ಪ್ರಶಸ್ತಿಯನ್ನು ನೀಡಲಿದ್ದಾರೆ.
ಈ ಕಾರ್ಯಕ್ರಮವನ್ನು ನವೆಂಬರ್ 1 ರಂದು ಸಂಜೆ 7 ಗಂಟೆಗೆ ದಾಯ್ಜಿವಲ್ಡ್ ಟಿವಿಯಲ್ಲಿ ಪ್ರಸಾರ ಮಾಡಲಾಗುತ್ತದೆ.
ಕೊಂಕಣಿ ನೃತ್ಯ, ನಾಟಕ, ಸಂಗೀತ-ಗಾಯನ, ಮತ್ತು ಜಾನಪದ ಕ್ಷೇತ್ರಗಳಲ್ಲಿ ಮಹತ್ವದ ಸಾಧನೆಗೈದ ಕರ್ನಾಟಕ ಮೂಲದ ಕಲಾವಿದರಿಗೆ ಗೌರವ ಸಲ್ಲಿಸುವ ನಿಟ್ಟಿನಲ್ಲಿ ಕೊಂಕಣಿ ವಿದ್ವಾಂಸ ಡಾ.ಪ್ರತಾಪ್ ನಾಯಕ್ ಅವರು ತಮ್ಮ ಕಾರ್ವಾಲ್ ಕುಟುಂಬದ ಪರವಾಗಿ ಈ ಪ್ರಶಸ್ತಿ ಕಾರ್ಯಕ್ರಮವನ್ನು ಆರಂಭಿಸಿದ್ದಾರೆ.