ಮಂಗಳೂರು, ಅ.28 (DaijiworldNews/PY): ತೊಕ್ಕೊಟ್ಟು ಓವರ್ ಬ್ರಿಡ್ಜ್ನಲ್ಲಿ ಅ.27ರ ಮಂಗಳವಾರದಂದು ನಡೆದ ಅಪಘಾತವೊಂದರಲ್ಲಿ ನವ ದಂಪತಿ ದಾರುಣವಾಗಿ ಮೃತಪಟ್ಟಿರುವ ಘಟನೆ ನಡೆದಿದ್ದು, ಘಟನಾ ಸ್ಥಳಕ್ಕೆ ಬುಧವಾರದಂದು ಪೊಲೀಸ್ ಆಯುಕ್ತ ವಿಕಾಸ್ ಕುಮಾರ್ ಭೇಟಿ ನೀಡಿದ್ದಾರೆ.











ಸ್ಥಳಕ್ಕೆ ಭೇಟಿ ನೀಡಿರುವ ಪೊಲೀಸ್ ಕಮೀಷನರ್ ವಿಕಾಸ್ ಕುಮಾರ್ ಅವರು ನವಯುಗ ಸಂಸ್ಥೆ ಜೊತೆಗೆ ಚರ್ಚಿಸಿದ್ದು, ತಕ್ಷಣವೇ ಸುರಕ್ಷತಾ ಕ್ರಮ ಜಾರಿ ಮಾಡಬೇಕು. ಸರ್ವಿಸ್ ರಸ್ತೆಗಳ ಬಳಸಿ ಸುರಕ್ಷತಾ ಕ್ರಮ ನಡೆಸಲು ಸೂಚನೆ ನೀಡಿದ್ದಾರೆ.
ಈ ವೇಳೆ ಉಳ್ಳಾಲ ಓವರ್ ಬ್ರಿಡ್ಜ್ಗೆ ಭೇಟಿ ನೀಡಿ ಪರಿಶೀಲಿಸಿದ ಕಮೀಷನರ್, ಸಂಚಾರಿ ಠಾಣಾ ಡಿಸಿಪಿ ಜತೆಗೂ ಚರ್ಚಿಸಿ, ತಕ್ಷಣಕ್ಕೆ ಕ್ರಮಕ್ಕೆ ಸೂಚನೆ ನೀಡಿದ್ದಾರೆ.
ತೊಕ್ಕೊಟ್ಟು ಓವರ್ ಬ್ರಿಡ್ಜ್ನಲ್ಲಿ ಮಂಗಳವಾರ ಸಂಜೆ ಲಾರಿ ಹಾಗೂ ಬೈಕ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ನವದಂಪತಿಗಳಾದ ಬಜಾಲ್ ನಿವಾಸಿ ರಯಾನ್ ಫೆರ್ನಾಂಡಿಸ್ (26) ಮತ್ತು ಪ್ರಿಯಾ ಫೆರ್ನಾಂಡಿಸ್ (26) ಮೃತಪಟ್ಟಿದ್ದಾರೆ. ಕಂಕನಾಡಿ ಫಾದರ್ ಮುಲ್ಲರ್ಸ್ ಆಸ್ಪತ್ರೆಯಲ್ಲಿ ಸಿಬ್ಬಂದಿಯಾಗಿರುವ ಇಬ್ಬರು ಕರ್ತವ್ಯ ಮುಗಿಸಿ ಉಳ್ಳಾಲ ಬಂಗೇರಲೇನ್ನಲ್ಲಿರುವ ಬಾಡಿಗೆ ಮನೆಗೆ ತೆರಳುವ ಸಂದರ್ಭ ತೊಕ್ಕೊಟ್ಟು ಓವರ್ ಬ್ರಿಡ್ಜ್ ಬಳಿ ಅಪಘಾತ ಸಂಭವಿಸಿದೆ. ದಂಪತಿ ಇದ್ದ ಬೈಕ್ ಉಳ್ಳಾಲ ಕಡೆಗೆ ತಿರುಗುವ ಸಂದರ್ಭ ಅತಿ ವೇಗವಾಗಿ ತೊಕ್ಕೊಟ್ಟು ಫ್ಲೈಓವರ್ ಮೂಲಕ ಬಂದ ಲಾರಿ ಢಿಕ್ಕಿ ಹೊಡೆದು, ಇಬ್ಬರ ಮೇಲೂ ಚಲಿಸಿ ಕೆಲ ಮೀ. ದೂರಕ್ಕೆ ಎಳೆದುಕೊಂಡು ಹೋಗಿ ನಿಂತಿದೆ. ಘಟನೆಯಿಂದ ಪ್ರಿಯಾ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ರಯಾನ್ ಆಸ್ಪತ್ರೆಗೆ ಸಾಗಿಸುವ ದಾರಿಮಧ್ಯೆ ಸಾವನ್ನಪ್ಪಿದ್ದರು.