ನೆಲ್ಯಾಡಿ, ಅ.28 (DaijiworldNews/PY): ಸುಮಾರು 25 ವರ್ಷಗಳಿಂದ ನೆಲ್ಯಾಡಿ ಪೇಟೆಯಲ್ಲಿ ಸುತ್ತಾಡಿಕೊಂಡು ಅಲ್ಲಿನ ವ್ಯಾಪಾರ ನಡೆಸುವ ಜನ ನೀಡಿದನ್ನು ತಿಂದು ಯಾರಿಗೂ ತೊಂದರೆ ನೀಡದೆ ಬದುಕಿದ ವ್ಯಕ್ತಿ ಸಾವನ್ನಪ್ಪಿದ್ದ ಸಂದರ್ಭ ಎಲ್ಲಾ ಸಮುದಾಯದವರು ಸೇರಿ ಅವರ ಅಂತಿಮ ವಿಧಾನಗಳನ್ನು ನಡೆಸಿ ಮಾನವೀಯತೆ ಮೆರೆದಿದ್ದಾರೆ.

ಕೊಕ್ಕಡ ನೆಲ್ಯಾಡಿ ಅರಸಿನಮಕ್ಕಿ ರೆಖ್ಯಾ ಈ ಪರಿಸರದ ಜನತೆಗೆ ಈ ವ್ಯಕ್ತಿ ಚಿರಪರಿಚಿತರಾಗಿದ್ದು, ಸುಮಾರು 25 ವರ್ಷಗಳಿಗೂ ಅಧಿಕಕಾಲದಿಂದ ಇಲ್ಲಿ ಸುತ್ತಾಡಿಕೊಂಡು ಅಲ್ಲಿನ ವ್ಯಾಪಾರ ನಡೆಸುವ ಜನ ನೀಡಿದನ್ನು ತಿಂದು ಯಾರಿಗೂ ತೊಂದರೆ ನೀಡದೆ ತಮ್ಮ ಪಾಡಿಗೆ ತಾವು ಇರುತ್ತಿದ್ದರು. 25 ವರ್ಷಗಳ ಹಿಂದೆ ನೆಲ್ಯಾಡಿಗೆ ಬಂದ ವ್ಯಕ್ತಿಗೆ ಜನರು ಸಿಐಡಿ ಶಂಕರ್ ಎಂದು ಹೆಸರಿಟ್ಟಿದ್ದರು.
ಇಲ್ಲಿ ಯಾವುದೋ ಮರ್ಡರ್ ಆಗಿದೆ ಅದಕ್ಕೆ ಪೋಲಿಸ್ ಇಲಾಖೆ ಇವರನ್ನು ಆರೋಪಿಯನ್ನು ಹಿಡಿಯುವ ಸಲುವಾಗಿ ಮಾರುವೇಷದಲ್ಲಿ ಕಳುಹಿಸಿದ್ದಾರೆ ಅಂದುಕೊಂಡು ಇವರಿಗೆ ಸಿಐಡಿ ಶಂಕರ್ ಎಂದೇ ಕರೆಯುತ್ತಿದ್ದರು. ಅಲ್ಲದೇ, ಈ ವ್ಯಕ್ತಿಯನ್ನು ನೋಡಿದರೆ ಜನರು ಹೆದರಿಕೊಳ್ಳುತ್ತಿದ್ದರು.
ಸುಮಾರು 25 ವರ್ಷಗಳಿಂದ ನೆಲ್ಯಾಡಿಯಲ್ಲೇ ವಾಸಿಸುತ್ತಿದ್ದ ಈ ವ್ಯಕ್ತಿಗೆ ಅಲ್ಲಿನ ಮನೆಯವರು ಹಾಗೂ ಹೋಟೆಲ್ನವರು ಊಟ ನೀಡುತ್ತಿದ್ದರು. ಆದರೆ, ಕೆಲವು ದಿನಗಳಿಂದ ಇವರು ಅನಾರೋಗ್ಯದಿಂದ ಬಳಲುತ್ತಿದ್ದು, ಪುತ್ತೂರಿನ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಶಂಕರ್ ಅವರ ಮೃತದೇಹವನ್ನು ಆಂಬ್ಯುಲೆನ್ಸ್ ಮೂಲಕ ತಂದು ನೆಲ್ಯಾಡಿಯ ಗಾಂಧಿ ಮೈದಾನದಲ್ಲಿ ನೆಲ್ಯಾಡಿ ಜನತೆಗೆ ಅಂತಿಮ ದರ್ಶನಕ್ಕೆ ಅವಕಾಶ ಮಾಡಿದ್ದು, ಬಳಿಕ ಬೈಕ್ ರ್ಯಾಲಿ ಮುಖೇನ ಅವರ ಮೃತದೇಹವನ್ನು ಸಾಗಿಸಿ ಕೌಕ್ರಾಡಿಯ ಸ್ಮಶಾನದಲ್ಲಿ ನೆಲ್ಯಾಡಿಯ ಸರ್ವ ಧರ್ಮದವರು ಹಾಗೂ ಎಲ್ಲಾ ರಾಜಕೀಯ ಪಕ್ಷದವರು ಒಟ್ಟಿಗೆ ಸೇರಿ ಅಂತ್ಯಕ್ರಿಯೆ ನೆರವೇರಿಸಿದರು.