ಮಂಗಳೂರು, ಅ.28 (DaijiworldNews/PY): ಸರಕಾರಿ ಆಸ್ಪತ್ರೆ ಹೋರಾಟ ಸಮಿತಿ ಉಳ್ಳಾಲ ಇದರ ಬ್ಯಾನರ್ ಅಡಿಯಲ್ಲಿ ಅ.28ರ ಬುಧವಾರ ಬೆಳಗ್ಗೆ 10 ಗಂಟೆಗೆ ತೊಕ್ಕೊಟ್ಟು ಬಸ್ ನಿಲ್ದಾಣದ ಬಳಿ ಸಾಮೂಹಿಕ ಧರಣಿ ನಡೆಸಲಾಗಿದ್ದು, ಸಂಜೆ 4ರವರೆಗೆ ಈ ಧರಣಿ ನಡೆಯಲಿದೆ.




ಸಮಿತಿಯು ತನ್ನ ಆಂದೋಲನ ಯೋಜನೆಯ ಭಾಗವಾಗಿ ವಿವಿಧ ಶಾಸಕರ ಕಚೇರಿಗಳ ಮುಂದೆ ಧರಣಿ ನಡೆಸುತ್ತಿದ್ದು, ಬುಧವಾರ ಮಂಗಳೂರು (ಉಳ್ಳಾಲ) ಶಾಸಕರ ಕಚೇರಿಯ ಎದುರು ಪ್ರತಿಭಟನೆ ನಡೆಸುತ್ತಿದೆ.
ಸರ್ಕಾರಿ ಆಸ್ಪತ್ರೆಗಳನ್ನು ಬಲಪಡಿಸುವುದು, ಖಾಸಗಿ ಆಸ್ಪತ್ರೆಗಳನ್ನು ನಿಯಂತ್ರಿಸುವುದು, ವೆನ್ಲಾಕ್ ಆಸ್ಪತ್ರೆಯನ್ನು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸುವುದು, ಪ್ರತಿ ಜಿಲ್ಲೆಗೆ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಕ್ಯಾನ್ಸರ್ ಆಸ್ಪತ್ರೆಯನ್ನು ಸ್ಥಾಪಿಸುವುದು, ಜನಸಂಖ್ಯೆಗೆ ಅನುಸಾರ ಪ್ರಾಥಮಿಕ ,ಸಮುದಾಯ ,ತಾಲೂಕು ಆಸ್ಪತ್ರೆ ನಿರ್ಮಿಸಿ, ಖಾಲಿ ಇರುವ ವೈದ್ಯ, ಸಿಬ್ಬಂದಿ ಹುದ್ದೆ ಭರ್ತಿ ಮಾಡುವಂತೆ ಒತ್ತಾಯಿಸಿ ಧರಣಿ ನಡೆಸುತ್ತಿದೆ.
ಡಿವೈಎಫ್ಐ ರಾಜ್ಯ ಅಧ್ಯಕ್ಷ ಮುನೀರ್ ಕಾಟಿಪಳ್ಳ, ಕೃಷ್ಣಪ್ಪ ಸಾಲಿಯಾನ್, ಕಾಂಗ್ರೆಸ್ ಮುಖಂಡರಾದ ದಿನೇಶ್ ರೈ ಹಾಗೂ ದಿನೇಶ್ ಕುಂಪಲಾ ಪಾಲ್ಗೊಂಡಿದ್ದರು.