ಉಡುಪಿ, ಅ.28 (DaijiworldNews/PY): ಜಿಲ್ಲೆಯಲ್ಲಿ ಮಾದಕ ವಸ್ತು ಸಾಗಾಟ ಮತ್ತು ಮಾರಾಟ ಪ್ರಕರಣಗಳಲ್ಲಿ ಭಾಗಿಯಾದ ಆರೋಪಿತರ ಪರೇಡನ್ನು ಅ.28ರ ಬುಧವಾರದಂದು ಪೂರ್ವಾಹ್ನ ಉಡುಪಿ ಜಿಲ್ಲೆಯ ಚಂದು ಮೈದಾನದಲ್ಲಿ ನಡೆಸಲಾಯಿತು.



ಪರೇಡ್ನಲ್ಲಿ ಬೈಂದೂರು ಠಾಣಾ ವ್ಯಾಪ್ತಿಯಿಂದ ಇಬ್ಬರು, ಕುಂದಾಪುರ ಠಾಣಾ ವ್ಯಾಪ್ತಿಯಿಂದ 18 ಜನ, ಕುಂದಾಪುರ ಗ್ರಾಮಾಂತರ ಠಾಣಾ ವ್ಯಾಪ್ತಿಯಿಂದ 4 ಜನ, ಕೋಟಾ ಠಾಣಾ ವ್ಯಾಪ್ತಿಯಿಂದ ಇಬ್ಬರು, ಉಡುಪಿ ನಗರ ಠಾಣಾ ವ್ಯಾಪ್ತಿಯಿಂದ 12 ಜನ, ಮಲ್ಪೆ ಠಾಣಾ ವ್ಯಾಪ್ತಿಯಿಂದ 5 ಜನ, ಮಣಿಪಾಲ ಠಾಣಾ ವ್ಯಾಪ್ತಿಯಿಂದ 16 ಜನ, ಸೆಸ್ ಠಾಣಾ ವ್ಯಾಪ್ತಿಯಿಂದ ಇಬ್ಬರು. ಕಾರ್ಕಳ ನಗರ ಠಾಣಾ ವ್ಯಾಪ್ತಿಯಿಂದ ಇಬ್ಬರು, ಪಡುಬಿದ್ರಿ ಠಾಣಾ ವ್ಯಾಪ್ತಿಯಿಂದ 5 ಜನ, ಕಾಪು ಠಾಣಾ ವ್ಯಾಪ್ತಿಯಿಂದ 3 ಜನ ಹಾಗೂ ಹಿರಿಯಡ್ಕ ಠಾಣಾ ವ್ಯಾಪ್ತಿಯಿಂದ ಓರ್ವ ಒಟ್ಟು 12 ಜನ ಆರೋಪಿತರು ಹಾಜರಿದ್ದರು.
ಪರೇಡ್ನಲ್ಲಿ ಭಾಗವಹಿಸಿದ್ದ ಆರೋಪಿತರನ್ನು ಉದ್ದೇಶಿಸಿ, ಪೊಲೀಸ್ ವರಿಷ್ಠಾಧಿಕಾರಿಯವರು ಸಮಾಜದ ಸ್ವಾಸ್ಥ್ಯ ವನ್ನುಪಾಡುವ ನಿಟ್ಟಿನಲ್ಲಿ ಇನ್ನು ಮುಂದಕ್ಕೆ ಇಂತಹ ಸಮಜದ್ರೋಹಿ ಚಟುವಟಿಕೆಗಳಲ್ಲಿ ಭಾಗವಹಿಸದೆ ಉತ್ತಮ ರೀತಿಯಲ್ಲಿ ಜೀವನ ನಡೆಸಲು ಕರೆ ನೀಡಿದರು. ಅಲ್ಲದೇ ಇದೇ ವೇಳೆ ಇನ್ನು ಮುಂದಕ್ಕೆ ಇಂತಹ ಪ್ರವೃತ್ತಿಯನ್ನು ಮುಂದುವರೆಸಿಕೊಂಡು ಹೋದಲ್ಲಿ ಕಠಿಣ ಕಾನೂನು ಕ್ರಮದ ಎಚ್ಚರಿಕೆಯನ್ನೂ ಸಹ ನೀಡಿದರು ಹಾಗೂ ಮಾದಕ ದ್ರವ್ಯ ಸಾಗಾಟ ಅಥವಾ ಮಾರಾಟಗಾರರ ಮಾಹಿತಿಯನ್ನು ನೀಡಿದಲ್ಲಿ ಮಾಹಿತಿ ನೀಡಿದವರ ವಿವರವನ್ನು ಗುಪ್ತವಾಗಿ ಇಡಲಾಗುವುದೆಂದು ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಎನ್.ವಿಷ್ಣುವರ್ಧನ ಐ.ಪಿ.ಎಸ್, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಕುಮಾರಚಂದ್ರ, ಪೊಲೀಸ್ ಉಪವಿಭಾಗಾಧಿಕಾರಿ ಟಿ.ಆರ್ ಜೈಶಂಕರ್, ಸಶಸ್ತ್ರ ಮೀಸಲು ಪಡೆಯ ಡಿವೈಎಸ್ಪಿ ರಾಘವೇಂದ್ರ, ಉಡುಪಿ ಪೊಲೀಸ್ ವೃತ್ತ ನಿರೀಕ್ಷಕ ಮಂಜುನಾಥ ಹಾಗೂ ಜಿಲ್ಲೆಯ ಇತರ ಠಾಣೆಗಳ ಪೊಲೀಸ್ ಉಪನಿರೀಕ್ಷಕರು ಪರೇಡ್ನಲ್ಲಿ ಉಪಸ್ಥಿತರಿದ್ದರು.