ಮಂಗಳೂರು, ಅ. 28 (DaijiworldNews/MB) : ರಾಜ್ಯ ಸರ್ಕಾರವು 2020ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ಪಟ್ಟಿಯನ್ನು ಪ್ರಕಟಿಸಿದ್ದು ವಲ್ಲಿವಗ್ಗ ಎಂದೇ ಖ್ಯಾತಿ ಪಡೆದಿರುವ ಖ್ಯಾತ ಕೊಂಕಣಿ ಕವಿ ವಲೇರಿಯನ್ ಡಿಸೋಜ ಅವರಿಗೂ ಕೂಡಾ ಈ ಗೌರವ ಪ್ರಶಸ್ತಿಗಾಗಿ ಆಯ್ಕೆ ಮಾಡಲಾಗಿದೆ.

ರಾಜ್ಯ ಸರ್ಕಾರವು ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆಗೈದ ನಾಲ್ವರನ್ನು 2020ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗಾಗಿ ಆಯ್ಕೆ ಮಾಡಿದೆ. ಪ್ರೋ| ಸಿ.ಪಿ. ಸಿದ್ಧಾಶ್ರಮ ಧಾರಾವಾಡ, ವಿ. ಮುನಿ ವೆಂಕಟಪ್ಪ, ಕೋಲಾರ, ರಾಮಣ್ಣ ಬ್ಯಾಟಿ (ವಿಶೇಷ ಚೇತನ), ಗದಗ, ಡಿ. ಎನ್. ಅಕ್ಕಿ, ಯಾದಗಿರಿ ಹಾಗೂ ವಲೇರಿಯನ್ ಡಿಸೋಜ (ವಲ್ಲಿ ವಗ್ಗ) ದಕ್ಷಿಣ ಕನ್ನಡ ಅವರು ಆಯ್ಕೆಯಾಗಿದ್ದಾರೆ.
ವಲ್ಲಿವಗ್ಗ ಎಂದೇ ಖ್ಯಾತಿ ಪಡೆದಿರುವ ವಲೇರಿಯನ್ ಡಿಸೋಜಾ ಅವರು ಜುಲೈ 27, 1947 ರಂದು ನಿರ್ಕಾನ್ ಪ್ಯಾರಿಷ್ನ ವಗ್ಗದಲ್ಲಿ ಜನಿಸಿದರು. ಬಳಿಕ ಅವರು ಮೈಸೂರಿಗೆ ಸ್ಥಳಾಂತರಗೊಂಡಿದ್ದು 1971 ರಲ್ಲಿ ಲಿಬೆರಾ ಅವರನ್ನು ವಿವಾಹವಾದರು. ಈ ದಂಪತಿ ಲಾಯ್ ಎಂಬ ಪುತ್ರನನ್ನು ಹೊಂದಿದ್ದಾರೆ.
ಅವರ ಮೊದಲ ಸಣ್ಣ ಕಥೆಯನ್ನು 1964 ರಲ್ಲಿ ರಾಕ್ನೋ ವಾರಪತ್ರಿಕೆಯಲ್ಲಿ ಪ್ರಕಟಿಸಲಾಗಿದೆ. ಕನ್ನಡದಲ್ಲಿ ಎಂ.ಎ. ಆಗಿದ್ದ ಅವರು ಬರವಣಿಗೆಯತ್ತ ತಮ್ಮ ಹೆಜ್ಜೆ ಇಟ್ಟು ಕೊಂಕಣಿ ಸಾಹಿತ್ಯ ಲೋಕಕ್ಕೆ ಅಪಾರ ಕೊಡುಗೆಯನ್ನು ನೀಡಿದರು.
ಕೊಂಕಣಿ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮ ಹೆಗ್ಗುರುತು ಮೂಡಿಸಿರುವ ವಲ್ಲಿವಗ್ಗ ಅವರು, 150 ಕ್ಕೂ ಹೆಚ್ಚು ಸಣ್ಣ ಕಥೆಗಳು, 100 ಕ್ಕೂ ಹೆಚ್ಚು ಕವನಗಳು ಮತ್ತು ಲೇಖನಗಳನ್ನು ಬರೆದಿದ್ದಾರೆ. ಹಾಗೆಯೇ ಇವರ 40 ಕ್ಕೂ ಹೆಚ್ಚು ಸಣ್ಣ ಕಥೆಗಳ ಕನ್ನಡ ಅನುವಾದ ಜನಪ್ರಿಯ ಕನ್ನಡ ನಿಯತಕಾಲಿಕೆಗಳಲ್ಲಿ ಪ್ರಕಟಿತವಾಗಿದೆ.
ಅವರು ತಮ್ಮ ಹಲವು ಸಣ್ಣ ಕಥೆಗಳನ್ನು ಆಕಾಶವಾಣಿ ಮಂಗಳೂರು ಹಾಗೂ ಮುಂಬೈನಲ್ಲಿ ಪ್ರಸ್ತುತಪಡಿಸಿದ್ದಾರೆ. ಹಾಗೆಯೇ ದೂರದರ್ಶನದ ಕವಿ ಸಂದರ್ಶನಗಳಲ್ಲಿ ಭಾಗಿಯಾಗಿದ್ದಾರೆ. ಅವರದ್ದೇ ಆದ ಲೌರ್ಡ್ಸ್ ಪ್ರಕಟಣೆ ಬ್ಯಾನರ್ ಅಡಿಯಲ್ಲಿ, ನಾಲ್ಕು ಪುಸ್ತಕಗಳನ್ನು ಪ್ರಕಟಿಸಲಾಗಿದೆ.
ವಲ್ಲಿ ವಗ್ಗ ಅವರು ಕೊಂಕಣಿ ಸಾಹಿತ್ಯಕ್ಕೆ ನೀಡಿದ ಕೊಡುಗೆಗಾಗಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಮತ್ತು ಕೊಂಕಣಿ ಕೂಟಮ್ ಬಹ್ರೇನ್ ಪ್ರಶಸ್ತಿ ನೀಡಿ ಗೌರವಿಸಿದೆ. ಹಾಗೆಯೇ ಕೊಂಕಣಿ ಸಾಹಿತ್ಯಕ್ಕೆ ಅವರ 50 ವರ್ಷಗಳ ಕೊಡುಗೆ ಅಪೂರ್ವವಾಗಿದೆ. ಅವರಿಗೆ 2019 ರಲ್ಲಿ ದೈಜಿ ದುಬೈ ಸಾಹಿತ್ಯ ಪುರಸ್ಕಾರ ನೀಡಿ ಗೌರವಿಸಲಾಗಿದೆ.