ಕುಂದಾಪುರ, ಅ.28 (DaijiworldNews/PY): ಮಹಿಳೆಯರಿಗೆ ರಕ್ಷಣೆ ಕೊಡುವ ಬದಲು ಅವರನ್ನು ಬೀದಿ ಪಾಲು ಮಾಡಿರುವುದು ಖಂಡನಾರ್ಹ. ಸ್ವಾವಲಂಬನಾ ಕೇಂದ್ರಕ್ಕೆ ಬೇರೆ ಕಟ್ಟಡ ನಿರ್ಮಾಣದ ಬಗ್ಗೆ ಶಾಸಕರು ಭರವಸೆ ನೀಡುವ ತನಕ ನಮ್ಮ ಹೋರಾಟ ನಿಲ್ಲುವುದಿಲ್ಲ. ಸ್ವಾವಲಂಬಿ ಮಹಿಳೆಯರಿಗೆ ನ್ಯಾಯ ಸಿಗದೇ ಇದ್ದರೆ ಉಡುಪಿ ಜಿಲ್ಲಾಧಿಕಾರಿಗಳ ಕಛೇರಿ ಎದುರು ಅಮರಣಾಂತ ಉಪವಾಸ ಮಾಡಲಿದ್ದೇವೆ ಎಂದು ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಹೇಳಿದರು.








ವಂಡ್ಸೆ ಗ್ರಾಮ ಪಂಚಾಯತ್ನ ಎಸ್.ಎಲ್.ಆರ್.ಎಂ ಘಟಕದ ಅಧೀನ ಸಂಸ್ಥೆಯಾದ ‘ಸ್ವಾವಲಂಬನಾ’ ವೃತ್ತಿ ತರಬೇತಿ ಕೇಂದ್ರವನ್ನು ಕಾನೂನು ಬಾಹಿರವಾಗಿ ತೆರವು ಮಾಡಿರುವುದು ಖಂಡಿಸಿ ಕುಂದಾಪುರ ತಾಲ್ಲೂಕು ಪಂಚಾಯತ್ ರಾಜ್ ಒಕ್ಕೂಟ ಹಾಗೂ ವಿವಿಧ ಸಂಘಟನೆಗಳ ಸಹಕಾರದೊಂದಿಗೆ ನಾಡದಲ್ಲಿ ನಡೆದ ಸರಣಿ ಸತ್ಯಾಗ್ರಹ ಉದ್ದೇಶಿಸಿ ಅವರು ಮಾತನಾಡಿದರು.
ಬೈಂದೂರು ಕ್ಷೇತ್ರ ಬಿಹಾರವಾಗುತ್ತಿದೆ. ಬೈಂದೂರು ಕ್ಷೇತ್ರದಲ್ಲಿ ಟೆಂಡರ್ ಹಾಕಲು ಎಲ್ಲರಿಗೂ ಅವಕಾಶವಿಲ್ಲವಂತೆ. ಇದನ್ನು ಕುಂದಾಪುರದ ಒಬ್ಬರು ವಕೀಲರು ಸರ್ಕಾರದ ಫ್ರಿನ್ಸಿಪಾಲ್ ಸೆಕ್ರೆಟರಿಗೆ ನೋಟಿಸು ನೀಡುತ್ತಾರೆ. ಇದೆಲ್ಲಾ ಏನು ಶಾಸಕರೇ ಎಂದು ಪ್ರಶ್ನಿಸಿದ ಅವರು, ಬೈಂದೂರು ಕ್ಷೇತ್ರದಲ್ಲಿ ಡಿಮ್ಡ್ ಫಾರೆಸ್ಟ್, ಸಿಆರ್ಜೆಡ್ ಸಮಸ್ಯೆ ಪರಿಹಾರವಾಗಿಲ್ಲ. ಕಸ್ತೂರಿ ರಂಗನ್ ವರದಿ ಅನುಷ್ಠಾನವಾಗುವ ಆತಂಕವಿದೆ. ಅಕ್ರಮ ಸಕ್ರಮ ಎರಡುವರೆ ವರ್ಷದಿಂದ ಯಾರಿಗೂ ಮಂಜೂರಾತಿ ಆಗಿಲ್ಲ. ಇದನ್ನು ಅಧಿವೇಶನದಲ್ಲಿ ನೀವು ಪ್ರಶ್ನೆ ಮಾಡಿಲ್ಲ. ಒತ್ತಿನಣೆಯಲ್ಲಿ ಏರ್ಪೋರ್ಟ್, ಮೆಡಿಕಲ್ ಕಾಲೇಜು, ಪದವಿ ಕಾಲೇಜು,. ಪಂಚ ನದಿ ಜೋಡಣೆಯ ಭರವಸೆ ಏನಾಯಿತು? ಎಂದು ಪ್ರಶ್ನಿಸಿದರು.
ಸೌಕೂರು ಏತ ನೀರಾವರಿ ಯೋಜನೆ ಬಗ್ಗೆ ಕುಮಾರಸ್ವಾಮಿ ಸರ್ಕಾರ ಇದ್ದಾಗ ಪ್ರಸ್ತಾವನೆ ಸಲ್ಲಿಸಿದ್ದು ನಾವು. ಇದನ್ನು ಕೊಲ್ಲೂರಿನಲ್ಲಿ ಬೇಕಾದರೂ ಹೇಳುತ್ತೇವೆ ಎಂದು ಸವಾಲು ಹಾಕಿದ ಅವರು, ರಾಷ್ಟ್ರ ಮಟ್ಟದಲ್ಲಿ ಪಂಚಾಯತ್ವೊಂದು ಗುರುತಿಸಿಕೊಂಡಿದ್ದರೆ ಅದನ್ನು ಸಹಿಸಲಾಗದೆ ತನಿಖೆ ಆದೇಶ ನೀಡುತ್ತಿರಿ. ನಾವು ಸುಮ್ಮನಿರುವುದಿಲ್ಲ. ನ್ಯಾಯಾಂಗದಲ್ಲಿ ಪ್ರಶ್ನೆ ಮಾಡುವ ಕೆಲಸ ಮಾಡುತ್ತೇವೆ ಎಂದರು.
ಸರಣಿ ಸತ್ಯಾಗ್ರಹ ಉದ್ದೇಶಿಸಿ ಉಡುಪಿ ಜಿಲ್ಲಾ ರೈತ ಸಂಘದ ವಕ್ತಾರ ವಿಕಾಸ್ ಹೆಗ್ಡೆ ಮಾತನಾಡಿದರು.
ಕಾಂಗ್ರೆಸ್ ಮುಖಂಡರಾದ ರಾಜು ಪೂಜಾರಿ, ಮದನ್ ಕುಮಾರ, ಎಸ್.ಪ್ರಕಾಶ್ಚಂದ್ರ ಶೆಟ್ಟಿ, ಶೇಖರ ಪೂಜಾರಿ, ಪ್ರದೀಪ ಕುಮಾರ್ ಶೆಟ್ಟಿ, ಜಗದೀಶ ದೇವಾಡಿಗ ಸಂತೋಷ ಶೆಟ್ಟಿ ಬಲಾಡಿ, ನಾಡ ಗ್ರಾ.ಪಂ. ಮಾಜಿ ಉಪಾಧ್ಯಕ್ಷ ಅರವಿಂದ್ ಮೊದಲಾದವರು ಉಪಸ್ಥಿತರಿದ್ದರು.
ಪಂಚಾಯತ್ ರಾಜ್ ಒಕ್ಕೂಟದ ಅಧ್ಯಕ್ಷ ಉದಯಕುಮಾರ ಶೆಟ್ಟಿ ಘಟನೆಯ ಹಿನ್ನೆಲೆ ವಿವರಿಸಿದರು. ಪ್ರಭು ಕೆನಡಿ ಪಿರೇರಾ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು.