ಉಡುಪಿ, ಅ. 28 (DaijiworldNews/MB) : 26 ಅಕ್ಟೋಬರಿನ ಸಂಜೆ 7:29ರ ಹೊತ್ತಿಗೆ ಚಂದ್ರ ಕುಂಭರಾಶಿಯ τ-Aqr (ಟೌ - ಎಕ್ವೆರೀ) ನಕ್ಷತ್ರವನ್ನು ಮುಚ್ಚುವ ಆಚ್ಛಾದನೆ (ಒಕಲ್ಟೇಷನ್ ) ನಡೆಯಿತು. 317 ಜ್ಯೋತಿರ್ವರ್ಷ ದೂರದಲ್ಲಿ ಇರುವ, ನಮ್ಮ ಸೂರ್ಯನ ವ್ಯಾಸಕ್ಕಿಂತ 4 ಪಟ್ಟು ಹೆಚ್ಚಿನ, ಈ ನಕ್ಷತ್ರ ಬಹಳ ಮಸುಕಾಗಿ ಕಾಣಿಸುತ್ತಿದ್ದಂತೆ ಚಂದ್ರನು ಇದರ ಮುಂದೆ ಹಾದು ಹೋಗುತ್ತಾ ಪುನಃ ಈ ನಕ್ಷತ್ರವು 8:27 ಘಂಟೆಗೆ ಗೋಚರಿಸಿತು.

ಈ ಆಚ್ಛಾದನೆಯು ಪೂರ್ಣಗೊಳ್ಳುತ್ತಿದಂತೆ, ಪೂರ್ಣಪ್ರಜ್ಞ ಹವ್ಯಾಸಿ ಖಗೋಳ ವೀಕ್ಷಕರ ಸಂಘದ ಅತುಲ್ ಭಟ್ ಇವರು, ಮಂಗಳೂರಿನಿಂದ ಇದರ ಛಾಯಾಚಿತ್ರವನ್ನು ಪಡೆದುಕೊಂಡರು.
τ-Aqr ನಕ್ಷತ್ರವು ಪುನಃ ಗೋಚರಿಸುತ್ತಿದ್ದಂತೆ ಒಂದು ವಿಮಾನವು ಚಂದ್ರನ ಮುಂದಿನಿಂದ ಹಾದುಹೋಯಿತು. ಖಗೋಳಶಾಸ್ತ್ರದಲ್ಲಿ ಇದನ್ನು ಸಂಕ್ರಮಣ (ಟ್ರಾನ್ಸಿಟ್) ಎನ್ನುತ್ತಾರೆ.
ಆಕಾಶದಲ್ಲಿ ಒಂದು ಗ್ರಹ ಅಥವಾ ನಕ್ಷತ್ರದ ಮುಂದಿನಿಂದ ಇನ್ನೊಂದು ಸಣ್ಣ ಗ್ರಹ ಅಥವಾ ಉಪಗ್ರಹವು ಹಾದು ಹೋಗುವುದನ್ನು ಅದರ ಸಂಕ್ರಮಣ ಎನ್ನುತ್ತಾರೆ. ಅಂತೆಯೇ ಸೂರ್ಯ ಹಾಗೂ ಗ್ರಹಗಳು ಒಂದು ರಾಶಿಯ ಮುಂದೆ ಹಾದು ಹೋಗುವುದನ್ನು ಕೂಡ ಸಂಕ್ರಮಣ ಎನ್ನುತ್ತಾರೆ.
ಒಂದು ಖಗೋಳ ವಿದ್ಯಾಮಾನವನ್ನು ಛಾಯಾಗ್ರಹಿಸುತ್ತಾ ಆಕಸ್ಮಿಕವಾಗಿ ಇನ್ನೊಂದು ವಿದ್ಯಮಾನಕ್ಕೆ ಉದಾಹರಣೆಯಾಗಿ ಬಂದ ಈ ವಿಮಾನವನ್ನು ಈ ಚಿತ್ರದಲ್ಲಿ ಕಾಣಬಹುದಾಗಿದೆ.