ಉಡುಪಿ, ಅ.28 (DaijiworldNews/PY): ವಾಣಿಜ್ಯ ಮತ್ತು ಜನವಸತಿ ಕಟ್ಟಡದ ಎದುರುಗಡೆಯಲ್ಲಿ ಅನಧಿಕೃತವಾಗಿ ಮೀನು ಮಾರಾಟ ಮಾಡುವುದನ್ನು ಕಟ್ಟಡದ ನಿವಾಸಿಗಳು ತೀವ್ರವಾಗಿ ವಿರೋಧಿಸಿದ್ದಾರೆ.



















ಇಲ್ಲಿನ ಸಂತೆಕಟ್ಟೆ ಪರಿಸರದಲ್ಲಿರುವ ಬಹುಮಹಡಿ ಕಟ್ಟಡದ ಎದುರುಗಡೆ ಹಲವಾರು ಮಂದಿ ಮೀನುಮಾರಾಟ ಮಹಿಳೆಯರು ಮೀನು ಮಾರಾಟ ನಡೆಸುತಿದ್ದು, ರಸ್ತೆ ಬದಿಯಲ್ಲಿ, ಕಟ್ಟಡದ ಎದುರು ಭಾಗದಲ್ಲಿ ಅನಧಿಕೃತವಾಗಿ ಮೀನು ಮಾರಾಟ ನಡೆಸುತಿದ್ದರೆ. ಇದರಿಂದಾಗಿ ಕಟ್ಟಡಕ್ಕೆ ಬರುವ ನಿವಾಸಿಗಳಿಗೆ ಹಾಗೂ ವಾಹನಗಳಿಗೆ ತೀವ್ರ ತೊಂದರೆ ಅನುಭವಿಸುತಿದ್ದಾರೆ.
ಸಂತೆಕಟ್ಟೆ ರಾಷ್ಟ್ರೀಯ ಹೆದ್ದಾರಿಯ ಬದಿಯಲ್ಲಿ ಒಂದು ಸುಸ್ಸಜ್ಜಿತವಾದ ಮೀನು ಮಾರಾಟ ಕೇಂದ್ರವನ್ನು ಸುಮಾರು 25 ಲಕ್ಷ ರುಪಾಯಿ ವೆಚ್ಚದಲ್ಲಿ 2015 ರಲ್ಲಿ ನಿರ್ಮಿಸಿ ಉದ್ಘಾಟಿಸಲಾಗಿತ್ತು. ಆದರೆ ಈ ಮೀನು ಮಾರುಕಟ್ಟೆಯಲ್ಲಿ ನೀರಿನ ಸಮಸ್ಯೆಯಿಂದಾಗಿ ಕ್ರಮೇಣ ಇಲ್ಲಿ ಮೀನು ಮಾರಾಟ ಮಾಡುವುದು ನಿಂತೇ ಹೋಗಿದ್ದು ಕಳೆದ ಹಲವಾರು ತಿಂಗಳುಗಳಿಂದ ಈ ಕಟ್ಟಡ ಬಂದ್ ಆಗಿಯೇ ಇದೆ.
ಈ ಕುರಿತು ದಾಯ್ಜಿವಲ್ಡ್ ಜೊತೆ ಮಾತನಾಡಿದ ಇಲ್ಲಿನ ನಿವಾಸಿಗಳಾದ ಸೀಮಾ ಕ್ವಾಡ್ರಸ್ ಅವರು "ಇಲ್ಲಿನ ಜನವಸತಿ ಪ್ರದೇಶದ ಎದುರಿನಲ್ಲಿ ಮೀನು ಮಾರಾಟ ಮಾಡುವುದು ಸಮಂಜಸವಲ್ಲ. ಸಂಜೆ 8:30 ರವರೆಗೆ ಕೂಡಾ ಇಲ್ಲಿ ಮೀನಿನ ವ್ಯಾಪಾರ ನಡೆಯುತ್ತದೆ ಇದರಿಂದಾಗಿ ಸಂಜೆಯ ವೇಳೇಗೆ ಪರಿಸರದಲ್ಲಿ ಅಪಾರ ಕೆಟ್ಟ ವಾಸನೆ ಹರಡುತ್ತದೆ. ಸಂಜೆ ಸಮಯದಲ್ಲಿ ಹಲವಾರು ಮಂದಿ ಖರೀದಿದಾರರು ಇಲ್ಲಿ ಮೀನು ಖರೀದಿಗೆ ಬರುತ್ತಾರೆ ಇದರಿಂದಾಗಿ ಸ್ಥಳದಲ್ಲಿ ಕಟ್ಟಡಕ್ಕೆ ಬರುವವರಿಗೆ ತಮ್ಮ ವಾಹನಗಳನ್ನು ತರಲು ಕೂಡಾ ಅನಾನುಕೂಲವಾಗುತ್ತಿದೆ" ಎಂದು ದೂರಿದ್ದಾರೆ.
ಕಳೆದ ಒಂದು ವಾರದಿಂದ ಈ ಪ್ರದೇಶದಲ್ಲಿ ಮೀನು ಮಾರಾಟ ಮಾಡುವವರ ಸಂಖ್ಯೆ ಕೂಡಾ ಹೆಚ್ಚಾಗಿದ್ದು ಇದೀಗ ಅವರಿಗೆ ತಾತ್ಕಾಲಿಕ ಶೆಡ್ ಅನ್ನು ಕೂಡಾ ನಿರ್ಮಿಸಲಾಗಿದೆ. ಸ್ಥಳದಲ್ಲಿ ಕೆಂಪು ಕಲ್ಲುಗಳನ್ನು ಬಳಸಿ ಗೋಡೆ ಕಟ್ಟುವ ಕಾಮಗಾರಿ ಕೂಡಾ ಆರಂಭವಾಗಿದೆ.
ಸುಮಾರು 238 ಮನೆಗಳು ಮತ್ತು 35 ಕ್ಕೂ ಅಧಿಕ ವಾಣಿಜ್ಯ ಮಳಿಗೆಗಳು ಈ ಬಹುಮಹಡಿ ಕಟ್ಟಡದಲ್ಲಿ ಇದ್ದು ಇಲ್ಲಿನ ದುರ್ವಾಸನೆಗೆ ಹೋಟೇಲ್, ಸೇರಿದಂತೆ ಕಟ್ಟಡದಲ್ಲಿರುವ ಇನ್ನಿತರ ವ್ಯಾಪಾರಸ್ಥರಿಗೆ ವ್ಯವಹಾರ ನಡೆಸುವುದು ಕೂಡಾ ಕಷ್ಟ ಸಾಧ್ಯವಾಗಿದೆ.
"ಮೀನಿನ ತ್ಯಾಜ್ಯ ನೀರನ್ನು ಕೂಡಾ ಇಲ್ಲಿಯೇ ಸುರಿಯುವುದರಿಂದ ತುಂಬಾ ಸಮಸ್ಯೆಯಾಗುತ್ತಿದೆ. ಈ ಕಟ್ಟಡದಲ್ಲಿ ಮಕ್ಕಳು ಸೇರಿದಂತೆ ಹಿರಿಯ ನಾಗರಿಕರು ಕೂಡಾ ವಾಸವಿದ್ದು ಮುಂದಿನ ದಿನಗಳಲ್ಲಿ ಇವರಿಗೆ ಆರೋಗ್ಯ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ. ಕಟ್ಡಡಕ್ಕೆ ವಾಹನಗಳು ಪ್ರವೇಶಿಸುವ ದಾರಿಯಲ್ಲಿ ಮೀನು ಮಾರಾಟ ನಡೆಸುವುದರಿಂದ ಕಟ್ಟಡಕ್ಕೆ ಬರುವ ವಾಹನಗಳಿಗೂ ಕೂಡಾ ಪ್ರವೇಶಿಸಲು ಕಷ್ಟ ಸಾಧ್ಯವಾಗುತ್ತಿದೆ" ಎಂದು ಕಟ್ಟಡದ ನಿವಾಸಿಗಳಾದ ಅರ್ಥರ್ ಅವರು ದೂರಿದ್ದಾರೆ.
ಅಕ್ರಮವಾಗಿ ಇಲ್ಲಿ ಮೀನು ಮಾರಾಟ ನಡೆಸುವುದರಿಂದಾಗಿ ತಮಗೆ ಎದುರಾಗಿರುವ ಸಮಸ್ಯೆಯ ಕುರಿತಾಗಿ ಕಟ್ಟಡದ ನಿವಾಸಿಗಳು ಜಿಲ್ಲಾಧಿಕಾರಿ, ಆರೋಗ್ಯ ಇಲಾಖೆ, ನಗರಸಭೆ ಪೌರಾಯುಕ್ತರಿಗೆ ಈಗಾಗಲೇ ದೂರನ್ನು ಕೂಡಾ ನೀಡಲಾಗಿದೆ. ಒಟ್ಟಿನಲ್ಲಿ ಕಟ್ಟಡದ ನಿವಾಸಿಗಳಿಗೆ ಈ ದುರ್ನಾತದಿಂದ ಶೀಘ್ರ ಮುಕ್ತಿ ಮತ್ತು ಮೀನು ಮಾರಾಟಗಾರರಿಗೆ ಮೀನು ಮಾರಾಟಕ್ಕೆ ಸೂಕ್ತ ಸ್ಥಳಾವಕಾಶವನ್ನು ನಗರಾಡಳಿತ ಮತ್ತು ಜನಪ್ರತಿನಿಧಿಗಳು ಮಾಡಿಕೊಡಬೇಕಾಗಿದೆ.