ಮಂಗಳೂರು, ಅ.29 (DaijiworldNews/PY): ಕಡಲತಡಿ ಮಂಗಳೂರಿನಲ್ಲಿ ದಶಕಗಳ ಬಳಿಕ ಮೊದಲ ಬಾರಿ ಭಾರತೀಯ ಜನತಾ ಪಾರ್ಟಿಯ ರಾಜ್ಯ ಕಾರ್ಯಕಾರಿಣಿ ಸಭೆ ನಡೆಯಲಿದೆ.

ನಳಿನ್ ಕುಮಾರ್ ಕಟೀಲ್ ಅವರು ಬಿಜೆಪಿಯ ರಾಜ್ಯಾಧ್ಯಕ್ಷರಾದ ಬಳಿಕ ಮೊದಲ ಬಾರಿಗೆ ಮಂಗಳೂರಿನಲ್ಲಿ ಬಿಜೆಪಿಯ ರಾಜ್ಯ ಕಾರ್ಯಕಾರಿಣಿ ಸಭೆ ನಡೆಯಲಿದೆ. ನವೆಂಬರ್ 5 ರಂದು ನಡೆಯುವ ಈ ರಾಜ್ಯ ಕಾರ್ಯಕಾರಿಣಿ ಸಭೆ ಯಶಸ್ವಿಯಾಗಿ ನಡೆಯಲು ರಾಜ್ಯಾಧ್ಯಕ್ಷರ ಉಪಸ್ಥಿತಿಯಲ್ಲಿ ಪಕ್ಷದ ಮುಖಂಡರು ಈಗಾಗಲೇ ಸಮಾಲೋಚನಾ ಸಭೆಗಳನ್ನು ನಡೆಸಿದ್ದು, ಪಕ್ಷದ ರಾಜ್ಯಾಧ್ಯಕ್ಷರು, ಸಂಸದರೂ ಆಗಿರುವ ನಳಿನ್ ಕುಮಾರ್ ಕಟೀಲ್ ಅವರ ತವರು ನೆಲದಲ್ಲಿ ಇಂತಹ ಪ್ರಮುಖ ಸಭೆ ನಡೆಯುತ್ತಿರುವುದು ಈ ಬಾರಿಯ ವೈಶಿಷ್ಟ್ಯ.
ಈ ಸಭೆಯಲ್ಲಿ ಪಕ್ಷದ ರಾಜ್ಯದ ವಿವಿಧ ಮೋರ್ಚಾಗಳ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು, ವಿವಿಧ ಪ್ರಕೋಷ್ಟದ ಸಂಚಾಲಕರು, ಸಹಸಂಚಾಲಕರು, ಕೋರ್ ಕಮಿಟಿ ಸದಸ್ಯರು, ವಿಭಾಗಗಳ ಪ್ರಭಾರಿಗಳು, ಸಹಪ್ರಭಾರಿಗಳು, ವಿಭಾಗ ಸಂಘಟನಾ ಕಾರ್ಯದರ್ಶಿಗಳು ಸೇರಿದಂತೆ ವಿವಿಧ ಪ್ರಮುಖ ಜವಾಬ್ದಾರಿಯಲ್ಲಿರುವವರನ್ನು ಆಹ್ವಾನಿಸಲಾಗಿದೆ.
ನವೆಂಬರ್ 5 ರಂದು ಬೆಳಿಗ್ಗೆ ಸಭೆ ಉದ್ಘಾಟನೆಗೊಳ್ಳಲಿದ್ದು, ಬೆಳಿಗ್ಗೆ ಮತ್ತು ಮಧ್ಯಾಹ್ನ ಎರಡು ಅವಧಿಯಲ್ಲಿ ಸಭೆ ನಡೆಯಲಿದೆ.