ಬೆಂಗಳೂರು, ಮೇ 27 : ನಮ್ಮ ಪಕ್ಷಕ್ಕೆ ಜನ ಸಂಪೂರ್ಣ ಬಹುಮತ ನೀಡಿಲ್ಲ. ಅಲ್ಲದೆ ಕನ್ನಡ ನಾಡಿನ ಜನತೆಯ ಮುಲಾಜಿನಲ್ಲಿರಬೇಕಾದ ನಾನು ಇದೀಗ ಕಾಂಗ್ರೆಸ್ ನವರ ಮುಲಾಜಿನಲ್ಲಿರಬೇಕಾದ ಪರಿಸ್ಥಿತಿ ಬಂದೊದಗಿದೆ. ನನಗೆ ವಾರಗಳ ಕಾಲವಕಾಶ ನೀಡಿದರೆ, ಸಚಿವ ಸಂಪುಟ ರಚನೆಯಾದ ನಂತರ ಸಾಲಮನ್ನಾ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತೇನೆ ಎಂದು ಸಿಎಂ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ವಿಧಾನಸೌಧದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಪ್ರತಿಪಕ್ಷಗಳು ರೈತರ ಸಾಲಮನ್ನಾ ಮಾಡದಿದ್ದರೆ ರಾಜೀನಾಮೆ ನೀಡಿ ಎಂದು ಒತ್ತಡ ಹಾಕುತ್ತಿದ್ದಾರೆ. ಆದರೆ ನನಗೆ ಅವರು ಈ ರೀತಿ ಒತ್ತಡ ಹಾಕುವ ಅಗತ್ಯವಿಲ್ಲ. ಕಾರಣ ನಾನು ಅಧಿಕಾರದ ಆಸೆಯಿಂದ ಮುಖ್ಯಮಂತ್ರಿ ಕುರ್ಚಿಗೆ ಅಂಟಿಕೊಂಡು ಕುಳಿತಿಲ್ಲ. ಒಂದು ವೇಳೆ ನಾನು ರೈತರ ಸಾಲಮನ್ನಾ ಮಾಡಿಲ್ಲವೆಂದರೆ ರಾಜೀನಾಮೆ ಕೊಡುತ್ತೇನೆ ಎಂದು ಕುಮಾರಸ್ವಾಮಿ ತಿಳಿಸಿದರು.