ಉಡುಪಿ, ಅ. 29 (DaijiworldNews/SM): ಮಾರ್ವಾಡಿ ಹಠಾವೋ ಅಭಿಯಾನವನ್ನು ದೈಜಿವರ್ಲ್ಡ್ ನಡೆಸಿಲ್ಲ. ಆದರೂ ಸಾಮಾಜಿಕ ಜಾಲತಾಣದಲ್ಲಿ ದೈಜಿವರ್ಲ್ಡ್ ಸಂಸ್ಥೆಯ ಹೆಸರನ್ನು ಬಳಸಿಕೊಂಡು ಸ್ಥಾಪಕ ಹಿತಾಶಕ್ತಿಗಳು ಸುಳ್ಳು ಸುದ್ದಿಗಳನ್ನು ರವಾನಿಸುತ್ತಿದ್ದು, ಇವರ ವಿರುದ್ಧ ಕ್ರಮ ಕೈಗೊಳ್ಳಲು ಉಡುಪಿ ಸೈಬರ್ ಕ್ರೈಂ ಠಾಣೆಗೆ ದೂರು ನೀಡಲಾಗಿದೆ.

ಮಾರ್ವಾಡಿ ಹಠಾವೋ ಅಭಿಯಾನವನ್ನು ದೈಜಿವರ್ಲ್ಡ್ ನಡೆಸದಿದ್ದರೂ ಕೂಡ ದೈಜಿವರ್ಲ್ಡ್ ಅಭಿಯಾನವನ್ನು ನಡೆಸಿದೆ ಎಂದು ಸುಳ್ಳು ಸುದ್ದಿಯನ್ನು ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಮಾಡಲಾಗುತ್ತಿದ್ದು, ಜನರನ್ನು ತಪ್ಪು ದಾರಿಗೆ ಒಯ್ಯಲಾಗುತ್ತಿದೆ. ಕಳೆದ ಕೆಲವು ಸಮಯಗಳಿಂದ ದೈಜಿವರ್ಲ್ದ್ ವಿರುದ್ಧ ಸ್ಥಾಪಿತ ಹಿತಾಸಕ್ತಿಗಳು ಒಂದಲ್ಲ ಒಂದು ರೀತಿಯಲ್ಲಿ ಸುಳ್ಳು ಸುದ್ದಿಗಳನ್ನು ಸಿದ್ಧಪಡಿಸಿ ಸಮರ ಸಾರುತ್ತಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಪೊಲೀಸ್ ಇಲಾಖೆಗೆ ಮನವಿ ಮಾಡಲಾಗಿದೆ.
ಇನ್ನು ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹಬ್ಬಿಸುತ್ತಿರುವ ಕೆಲವರು ಸಂಘಟನೆಗಳ ಪ್ರಮುಖರ ಹೆಸರು ಬಳಸಿ ಪೋಸ್ಟ್ ಗಳನ್ನು ಬರೆದಿದ್ದು, ದೈಜಿವರ್ಲ್ಡ್ ಮಾಧ್ಯಮಕ್ಕೆ ಬಹಿಷ್ಕಾರ ಎಂಬುವುದಾಗಿ ಪ್ರಮುಖ ಸಂಘಟನೆಗಳ ಮುಖಂಡರ ಹೆಸರುಗಳನ್ನು ಬಳಸಿ ಬರೆದಿದ್ದಾರೆ. ಈ ಕುರಿತಂತೆ ಸಂಘಟನೆ ಪ್ರಮುಖರನ್ನು ದೈಜಿವರ್ಲ್ಡ್ ಸಂಪರ್ಕಿಸಿದ್ದು, ನಾವು ದೈಜಿವರ್ಲ್ಡ್ ಬಗ್ಗೆ ಯಾವುದೇ ವಿರೋಧ ಬರಹಗಳನ್ನು ಬರೆದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ದೈಜಿವರ್ಲ್ಡ್ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಸೈಬರ್ ಕ್ರೈಂ ಠಾಣೆಗೆ ದೂರು ನೀಡಲಾಗಿದೆ.