ಬಂಟ್ವಾಳ, ಅ. 29 (DaijiworldNews/SM): ಫರಂಗಿಪೇಟೆಯಲ್ಲಿ ಬಿಜೆಪಿ ಮುಖಂಡ ಹಾಗೂ ಛಾಯಾಗ್ರಾಹಕನ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ಗುರುವಾರದಂದು ಫರಂಗಿಪೇಟೆಯಲ್ಲಿ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಸವಾದ್(20) ಬಂಧಿತ ಆರೋಪಿ.


ಘಟನೆ ನಡೆದು ಕೆಲವೇ ಗಂಟೆಗಳಲ್ಲಿ ಕಾರ್ಯಾಚರಣೆ ನಡೆಸಿದ ಬಂಟ್ವಾಳ ಪೋಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದು, ಇನ್ನೋರ್ವ ಆರೋಪಿ ಸವಾದ್ ಪತ್ತೆಗಾಗಿ ಶೋಧ ಕಾರ್ಯ ಮುಂದುವರಿಸಿದ್ದರು. ಆರೋಪಿಗಳಾದ ಅಮ್ಮೆಮ್ಮಾರು ನಿವಾಸಿ ಮಹಮ್ಮದ್ ಅರ್ಷದ್(19), ಅಬ್ದುಲ್ ರೆಹಮಾನ್(22) ಮತ್ತು ಮಹಮ್ಮದ್ ಸೈಪುದ್ದೀನ್(22)ರನ್ನು ನಿನ್ನೆ ರಾತ್ರಿಯೆ ಬಂಧಿಸಲಾಗಿತ್ತು.
ಘಟನೆಯ ವಿವರ:
ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಫರಂಗಿಪೇಟೆಯಲ್ಲಿ ಬುಧವಾರ ರಾತ್ರಿ 7.45ರ ಸುಮಾರಿಗೆ ಪುದು ಗ್ರಾಮದ ಕೊಟ್ಟಿಂಜ ನಿವಾಸಿ ದಿನೇಶ್ ಶೆಟ್ಟಿ ಎಂಬವರ ಸ್ಟುಡಿಯೋಗೆ ನುಗ್ಗಿ ಅವರ ಮೇಲೆ ಚೂರಿಯಿಂದ ಹಲ್ಲೆ ನಡೆಸಲಾಗಿತ್ತು. ದಿನೇಶ್ ಶೆಟ್ಟಿ ನಿನ್ನೆ ಬುಧವಾರ ರಾತ್ರಿ 7.45ರ ಸುಮಾರಿಗೆ ಸ್ಟುಡಿಯೋದಲ್ಲಿದ್ದ ವೇಳೆ ನಾಲ್ಕು ಮಂದಿ ದುಷ್ಕರ್ಮಿಗಳ ತಂಡ ಏಕಾಏಕಿ ನುಗ್ಗಿ ದಾಳಿ ನಡೆಸಿದೆ. ಘಟನೆಯಲ್ಲಿ ದಿನೇಶ್ ಅವರ ತಲೆ ಹಾಗೂ ಹೊಟ್ಟೆಗೆ ಗಂಭೀರ ಗಾಯವಾಗಿದ್ದು, ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇತ್ತೀಚೆಗೆ ಕುಂಪನಮಜಲು ಎಂಬಲ್ಲಿ ಹೆಣ್ಣು ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ನಡೆದಿತ್ತು. ಈ ಪ್ರಕರಣದಲ್ಲಿ ದಿನೇಶ್ ಶೆಟ್ಟಿ ಹೆಣ್ಣು ಮಗುವಿನ ಕಡೆಯವರಿಗೆ ಬೆಂಬಲ ನೀಡಿದ್ದರು. ಈ ದ್ವೇಷದಿಂದ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿದ್ದ ಓರ್ವ ಆರೋಪಿತ ದಿನೇಶ ಶೆಟ್ಟಿಯನ್ನು ಹತ್ಯೆಗೈಯುವ ಉದ್ದೇಶದಿಂದ ದಾಳಿ ನಡೆಸಿದ್ದಾನೆ. ನಾಲ್ಕು ಮಂದಿಯ ತಂಡ ದಾಳಿ ನಡೆಸಿದ್ದು, ಕತ್ತಿಯಿಂದ ದಿನೇಶ್ ಶೆಟ್ಟಿಯವರ ತಲೆಗೆ, ಬಲ ಕೈಗೆ ಹಲ್ಲೆ ನಡೆಸಿದ್ದರು.
ಆ ವೇಳೆಯಲ್ಲಿ ಅಲ್ಲಿದ್ದ ಶೇಖರ ಪೂಜಾರಿ, ಹಲ್ಲೆಯಾಗುವುದನ್ನು ತಪ್ಪಿಸಲು ಅಲ್ಲೇ ಇದ್ದ ಕುರ್ಚಿಯಿಂದ ಜೋರಾಗಿ ಇಬ್ಬರು ಆರೋಪಿಗಳಿಗೆ ಹೊಡೆದಿದ್ದಾರೆ. ಈ ವೇಳೆ ಆರೋಪಿಗಳ ಕೈಗೆ ಗಾಯವಾಗಿದೆ. ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಬಂಟ್ವಾಳ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದ ನಾಲ್ಕು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.