ಬಂಟ್ವಾಳ, ಅ. 29 (DaijiworldNews/SM): ಬಂಟ್ವಾಳದ ಬೈಪಾಸ್ ಭಂಡಾರಿಬೆಟ್ಟು ವಸ್ತಿ ರೆಸಿಡೆನ್ಸಿಯಲ್ಲಿ ನಡೆದ ಸುರೇಂದ್ರ ಬಂಟ್ವಾಳ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಮೂವರು ಆರೋಪಿಗಳನ್ನು ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಬಂಧಿಸಲಾಗಿರುವ ಮೂವರು ಆರೋಪಿಗಳನ್ನು ಬಂಟ್ವಾಳ ವೃತ್ತ ನಿರೀಕ್ಷಕ ಟಿ.ಡಿ. ನಾಗರಾಜ್ ನೇತೃತ್ವದ ತಂಡ ಶಿವಮೊಗ್ಗ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಆರೋಪಿಗಳನ್ನು ಪೊಲೀಸ್ ಕಸ್ಟಡಿಗೆ ಪಡೆದುಕೊಳ್ಳಲಾಗಿದೆ. ಈ ವರೆಗೆ ಒಟ್ಟು ಐದು ಆರೋಪಿಗಳ ಬಂಧನವಾಗಿದ್ದು ಆರೋಪಿಗಳು ಪೋಲೀಸ್ ಕಸ್ಟಡಿಯಲ್ಲಿದ್ದಾರೆ.
ಉಳಿದಂತೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನು ಕೆಲವು ಮಂದಿ ಬಂಧನವಾಗುವ ಸಾಧ್ಯತೆಗಳಿವೆ ಎಂಬ ಮಾಹಿತಿ ಇದೆ. ಪ್ರಮುಖ ಹಂತಕರಾದ ಸತೀಶ್ ಕುಲಾಲ್ ಹಾಗೂ ಗಿರಿ ಯಾನೆ ಗಿರೀಶ್ ಕಿನ್ನಿಗೊಳಿ ಜೊತೆಯಲ್ಲಿ ವೆಂಕಪ್ಪ ಯಾನೆ ವೆಂಕಟೇಶ್, ಪಬ್ಬು ಯಾನೆ ಪ್ರದೀಪ್ ಹಾಗೂ ಬಂಡಾಡಿ ಶರೀಫ್ ಎಂಬವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.
ಹತ್ಯೆಯ ಆರೋಪಿಗಳಾದ ಸತೀಶ್ ಮತ್ತು ಗಿರೀಶ್ ಎಂಬವರ ಬಂಧನ ಬಳಿಕ ತನಿಖೆಯ ವೇಳೆ ತಿಳಿದುಬಂದಂತೆ ಮೂವರು ಆರೋಪಿಗಳ ಬಂಧನವಾಗಿದೆ. ಇವರ ತನಿಖೆಯಲ್ಲಿ ಇನ್ನಷ್ಟು ಆರೋಪಿಗಳ ಬಗ್ಗೆ ಸುಳಿವು ನೀಡಿದ್ದು ಶೀಘ್ರವಾಗಿ ಬಂಧನವಾಗುವ ಸಾಧ್ಯತೆಗಳಿವೆ ಎಂದು ತಿಳಿದುಬಂದಿದೆ. ಬಂಟ್ವಾಳ ವೃತ್ತ ನಿರೀಕ್ಷಕ ಟಿ.ಡಿ.ನಾಗರಾಜ್ ಕೊಲೆ ಆರೋಪಿಗಳ ತನಿಖೆ ನಡೆಸುತ್ತಿದ್ದಾರೆ.