ಉಡುಪಿ, ಅ.30 (DaijiworldNews/PY): ಕುಂದಾಪುರ ತಾಲೂಕಿನ ತೆಕ್ಕಟ್ಟೆಯ ಪಟೇಲರಾಬೆಟ್ಟು ನಿವಾಸಿ ಸುರೇಂದ್ರ ಜಿ ಪೂಜಾರಿ ಅವರ ಪತ್ನಿ ದೀಪಾ (33) ಎಂಬವರು ಪತಿ ಹಾಗೂ ಅವರ ಕುಟುಂಬದವರ ವಿರುದ್ದ ವರದಕ್ಷಿಣೆ ಕಿರುಕುಳ ಪ್ರಕರಣ ದಾಖಲಿಸಿದ್ದಾರೆ.

ಮೊದಲ ಆರೋಪಿ ಸುರೇಂದ್ರ ಜಿ ಪೂಜಾರಿ ಎಂಬವರೊಂದಿಗೆ ಗುರುಹಿರಿಯರ ಸಮಕ್ಷಮದಲ್ಲಿ ಕುಂದಾಪುರ ಶ್ರೀ ನಾರಾಯಣ ಗುರು ಕಲ್ಯಾಣ ಮಂಟಪದಲ್ಲಿ ಮೇ 3, 2012 ರಂದು ವಿವಾಹವಾಗಿದ್ದರು. ದೀಪಾ ಅವರ ಮಾವ ಗೋವಿಂದ ಪೂಜಾರಿ, ಅತ್ತೆ ಚಂದು ಪೂಜಾರಿ ಮತ್ತು ಇತರರ ಒತ್ತಡಕ್ಕೆ ಮಣಿದು ಎರಡು ಲಕ್ಷ ರೂಪಾಯಿಗಳ ವರದಕ್ಷಿಣೆ ಹಣವನ್ನು ನಗದು ರೂಪದಲ್ಲಿ ಪಾವತಿಸಿದ್ದೇನೆ ಎಂದು ದೀಪಾ ಹೇಳಿದ್ದಾರೆ. ವಿವಾಹವಾದ ಬಳಿಕ ದೀಪಾ ಹಾಗೂ ಸುರೇಂದ್ರ ಅವರು ಬೆಂಗಳೂರಿನಲ್ಲಿ ವಾಸವಾಗಿದ್ದರು.
ಪತಿ ಹಾಗೂ ಕುಟುಂಬದ ಇತರ ಸದಸ್ಯರು ದಿನಾಲೂ ದೀಪಾ ಅವರಿಗೆ ದೈಹಿಕ ಹಾಗೂ ಮಾನಸಿಕ ಹಿಂಸೆ ನೀಡಿ ಇನ್ನು ಹೆಚ್ಚಿಗೆ ವರದಕ್ಷಿಣೆ ತರುವಂತೆ ಪೀಡಿಸುತ್ತಿದ್ದು, ಇಲ್ಲಿ ನಾವು ಕೊಡುವ ತೊಂದರೆಯನ್ನು ಮನೆಯವರಿಗೆ ಹೇಳಿದರೆ ಕೊಲ್ಲದೇ ಬಿಡುವುದಿಲ್ಲವಾಗಿ ಜೀವ ಬೆದರಿಕೆ ಹಾಕಿದ್ದು, ದೀಪಾ ಅವರನ್ನು ಮನೆ ಬಿಟ್ಟು ಹೋಗುವಂತೆ ಒತ್ತಾಯ ಮಾಡಿ, ದೈಹಿಕ ಹಾಗೂ ಮಾನಸಿಕ ಹಿಂಸೆ ನೀಡಿ ಮನೆಯಿಂದ ಹೊರ ಹಾಕಿದ್ದಾರೆ ಎಂದು ದೀಪಾ ಹೇಳಿದ್ದಾರೆ.
ಈ ಬಗ್ಗೆ ಇಲ್ಲಿನ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.