ಹೊಸಂಗಡಿ, ಅ.30 (DaijiworldNews/HR): ವಂಡ್ಸೆ ಸ್ವಾವಲಂಬನಾ ಕೇಂದ್ರಕ್ಕೆ ಮೂಲಭೂತ ಸೌಕರ್ಯ ಒದಗಿಸಿ ಕೊಟ್ಟು, ಖಾಯಂ ಜಾಗವನ್ನು, ಬದಲಿ ವ್ಯವಸ್ಥೆಯನ್ನು 7 ದಿನಗಳೊಳಗೆ ಕಲ್ಪಿಸದಿದಲ್ಲಿ ಪ್ರತಿಭಟನೆಯನ್ನು ವಾಪಾಸು ಪಡೆಯುತ್ತೇವೆ ಎಂದು ಹೇಳಿದರೂ ಕ್ಷೇತ್ರದ ಶಾಸಕರು ಅದಕ್ಕೆ ಸ್ಪಂದನೆ ನೀಡುತ್ತಿಲ್ಲ. ಹಾಗಾಗಿ ನಮ್ಮ ಪ್ರತಿಭಟನೆ ಜಿಲ್ಲಾ ಮಟ್ಟದ ತನಕ ಮುಂದುವರಿಯಲಿದೆ ಎಂದು ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಹೇಳಿದ್ದಾರೆ.

ಹೊಸಂಗಡಿಯಲ್ಲಿ ಸುದ್ಧಿಗಾರರ ಜೊತೆ ಮಾತನಾಡಿದ ಅವರು, ಮಹಿಳೆಯರಿಗೆ ರಕ್ಷಣೆ ನೀಡುವ ಕೆಲಸವನ್ನು ಶಾಸಕರು ಮಾಡಿದ್ದಲ್ಲಿ ನಾವು ಧರಣಿಯನ್ನು ವಾಪಾಸು ಪಡೆಯುತ್ತೇವೆ ಎಂದರು.
ಕೊಲ್ಲೂರಿನಲ್ಲಿ ರೋಪ್ ವೇ ಮಾಡುವ ಬಗ್ಗೆ ಶಾಸಕರು ಹೇಳಿದ್ದು, ಅಲ್ಲಿ ಅನೇಕ ಜೀವರಾಶಿಗಳು ಅಲ್ಲಿದ್ದು, ರೋಪ್ ವೇ ಮಾಡುವ ಮೂಲಕ ಪಾರಂಪರಿಕ ಶಂಕರಾಚಾರ್ಯರ ಪೀಠಕ್ಕೆ ಇದರಿಂದ ಧಕ್ಕೆಯಾಗುತ್ತದೆ ಎಂದು ಪರಿಸರವಾದಿಗಳು ಹೇಳುತ್ತಿದ್ದಾರೆ. ಇಂತಹ ಯೋಜನೆಗಳನ್ನು ರೂಪಿಸುವಾಗ ಅಲ್ಲಿನ ಜನತೆಯ ಹಾಗೆ ಬೇರೆ ಬೇರೆ ರೀತಿಯ ಚರ್ಚೆಗಳ ಮೂಲಕ ತೀರ್ಮಾನಿಸಬೇಕು. ಕೊಲ್ಲೂರಿಗೊಂದು ಇತಿಹಾಸವಿದೆ. ಅದನ್ನ ನಂಬಿಕೊಂಡು ಬಂದಿರುವ ಲಕ್ಷಗಟ್ಟಲೆ ಮಂದಿ ಇದ್ದಾರೆ. ಜನರ ಮನಸ್ಸಿಗೆ ನೋವಾಗದಂತೆ ಕಾರ್ಯಪ್ರವೃತ್ತರಾಗಬೇಕು. ಇಲ್ಲವಾದಲ್ಲಿ ತಪ್ಪು ಸಂದೇಶ ನೀಡಿದಂತೆ ಆಗುತ್ತದೆ ಎಂದು ಅವರು ಹೇಳಿದರು.