ಕಾಸರಗೋಡು, ಅ. 31 (DaijiworldNews/MB) : ಕರ್ನಾಟಕದಿಂದ ಕಾಸರಗೋಡು ಜಿಲ್ಲೆಗೆ ಪ್ರವೇಶಿಸುವ 17 ಗಡಿ ರಸ್ತೆಗಳ ಪೈಕಿ 5 ಕಡೆ ಆಂಟಿಜನ್ ಟೆಸ್ಟ್ ವ್ಯವಸ್ಥೆ ಮಾಡಲಾಗುವುದು. ಹೊರ ರಾಜ್ಯಗಳಿಂದ ಕೋವಿಡ್ ಸರ್ಟಿಫಿಕೇಟ್ ಇಲ್ಲದೆ ಕೇರಳಕ್ಕೆ ಪ್ರವೇಶಿಸುವವರಿಗೆ ಆಂಟಿಜನ್ ಟೆಸ್ಟ್ ಮಾಡಲಾಗುವುದು. ಐದು ಗಡಿ ರಸ್ತೆಗಳಲ್ಲಿ ಇದಕ್ಕಾಗಿ ತಪಾಸಣೆ ಕೇಂದ್ರ ತೆರೆಯಲಾಗುತ್ತದೆ.

ವೀಡಿಯೋ ಕಾನ್ಫೆರೆನ್ಸ್ ಮೂಲಕ ಶುಕ್ರವಾರ ನಡೆದ ಜಿಲ್ಲಾ ಮಟ್ಟದ ಕೊರೋನಾ ಸಲಹಾ ಸಮಿತಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅಧ್ಯಕ್ಷತೆ ವಹಿಸಿದ್ದರು.
ತಲಪ್ಪಾಡಿ ಚೆಕ್ ಪೋಸ್ಟ್ (ಎನ್.ಎಚ್.66), ಅಡ್ಕಸ್ಥಳ, ಅಡ್ಯನಡ್ಕರಸ್ತೆ (ಎಸ್.ಎಚ್.55), ಆದೂರು-ಕೊಟ್ಯಾಡಿ-ಸುಳ್ಯ ರಾಜ್ಯ ಹೆದ್ದಾರಿ (ಎಸ್.ಎಚ್.55), ಪಾಣತ್ತೂರು-ಚೆಂಬೇರಿ-ಮಡಿಕೇರಿ (ಎಸ್.ಎಚ್.56), ಮಾಣಿಮೂಲೆ-ಸುಳ್ಯ ರಸ್ತೆಗಳಲ್ಲಿ ಚೆಕ್ಪೋಸ್ಟ್ ಸಜ್ಜುಗೊಳಿಸಿ, ಆಂಟಿಜೆನ್ ಟೆಸ್ಟ್ಗೆ ಸೌಲಭ್ಯ ಜಾರಿಗೊಳಿಸಲಾಗುವುದು. ಈ ಚೆಕ್ಪೋಸ್ಟ್ಗಳಲ್ಲಿ ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆ ವರೆಗೆ ಆಂಟಿಜೆನ್ ಟೆಸ್ಟ್ ಸೌಲಭ್ಯ ಇರುವುದು. ಈ ಚೆಕ್ಪೋಸ್ಟ್ಗಳ ಮೂಲಕ ಸಂಜೆ 6 ಗಂಟೆಯ ನಂತರ ಬೆಳಗ್ಗೆ 6 ಗಂಟೆವರೆಗೆ ಇತರ ರಾಜ್ಯಗಳಿಂದ ಆಗಮಿಸುವ ಪ್ರಯಾಣಿಕರು ಕೋವಿಡ್ ನೆಗೆಟಿವ್ ಸರ್ಟಿಫಿಕೆಟ್ ಹಾಜರುಪಡಿಸಬೇಕು. ತೂಮಿನಾಡ್ ರಸ್ತೆ, ಕೆದಂಪಾಡಿ ಪದವು ರಸ್ತೆ, ಸುಂಕದಕಟ್ಟೆ-ಮುಡಿಪು ರಸ್ತೆ, ಕುರುಡಪದವು ರಸ್ತೆ, ಮುಳಿಗದ್ದೆ ರಸ್ತೆ, ಬೆರಿಪದವುರ್ತೆ, ಸ್ವರ್ಗ-ಆರ್ಲಪದವು ರಸ್ತೆ, ಕೊಟ್ಯಾಡಿ-ಪಳ್ಳತ್ತೂರು-ಈಶ್ವರಮಂಗಲ ರಸ್ತೆ, ಕೊಟ್ಯಾಠಡಿ-ಅಡೂರು-ದೇವರಡ್ಕ ರಸ್ತೆ, ಗಾಳಿಮುಖ-ಈಶ್ವರಮಂಗಲ-ದೇಲಂಪಾಡಿ ರಸ್ತೆ, ನಾಟೆಕಲ್ಲು-ಸುಳ್ಯಪದವು ರಸ್ತೆ, ಚೆನ್ನಂಕುಂಡ್-ಚಾಮಕೊಚ್ಚಿ ರಸ್ತೆ ಸೇರಿದಂತೆ 12 ಕಡೆಗಳಲ್ಲಿ ಗಳಲ್ಲಿ ಕರ್ನಾಟಕದಿಂದ ಜಿಲ್ಲೆಗೆ ಪ್ರವೇಶಿಸುವ ಪ್ರಯಾಣಿಕರು ಕೋವಿಡ್ ನೆಗೆಟಿವ್ ಸರ್ಟಿಫಿಕೆಟ್ ಹಾಜರುಪಡಿಸಬೇಕು.
ಒಂದೇ ದಿನ ಆಗಮಿಸಿ ಮರಳುವ, ದಿನನಿತ್ಯ ಪ್ರಯಾಣ ನಡೆಸುವವರು ನೆಗೆಟಿವ್ ಸರ್ಟಿಫಿಕೆಟ್ ಹಾಜರುಪಡಿಸುವುದು ಅಥವಾ ಗಡಿಪ್ರದೇಶದ ಆಂಟಿಜೆನ್ ಟೆಸ್ಟ್ಗೆ ಒಳಗಾಗು ಗುವ ಅಗತ್ಯವಿಲ್ಲ. ಚಿಕಿತ್ಸೆಯ ತುರ್ತು ಅಗತ್ಯಗಳಿಗೆ ದಕ್ಷಿಣ ಕನ್ನಡ ಜಿಲ್ಲೆಗೆ ತೆರಳಿ ಅದೇ ದಿನ ಮರಳುವ ಮಂದಿಗೆ, ದಿನಂಪ್ರತಿ ಪ್ರಯಾಣಿಸುವವರು ನೆಗೆಟಿವ್ ಸರ್ಟಿಫಿಕೆಟ್ ಹಾಜರುಪಡಿಸುವುದು ಅಥವಾ ಗಡಿಪ್ರದೇಶದ ಆಂಟಿಜೆನ್ ಟೆಸ್ಟ್ಗೆ ಒಳಗಾಗಬೇಕಿಲ್ಲ.
ಮಂಜೇಶ್ವರ ಗೋವಿಂದ ಪೈ ಸ್ಮಾರಕ ಕಾಲೇಜಿನ ಸಿ.ಎಫ್.ಎಲ್.ಟಿ.ಸಿ. ಸಜ್ಜುಗೊಳಿಸಿರುವ ನೂತನ ಬ್ಲೋಕ್ ಹೊರತುಪಡಿಸಿ ಇತರ ಎಲ್ಲ ಕಟ್ಟಡಗಳಲ್ಲಿ ಪರೀಕ್ಷೆಗಳನ್ನು ನಡೆಸಲು ಮಂಜೂರಾತಿ ನೀಡಲು, ಚೆಮ್ನಾಡ್ ಗ್ರಾಮ ಪಂಚಾಯತ್ ನ ಸಿ.ಎಫ್.ಎಲ್.ಟಿ.ಸಿ. ಅಜ್ಜುಗೊಳಿಸಿರುವ ಸದಿಯ್ಯಾ ಕಾಲೇಜನ್ನು ಪರೀಕ್ಷೆ ನಡೆಸಲು ಬಿಟ್ಟುಕೊಡಲು ಸಭೆ ನಿರ್ಧರಿಸಿದೆ. ನೀಲೆಶ್ವರ ಕ್ಯಾಂಪಸ್ ನಲ್ಲಿ ಸಜ್ಜುಗೊಳಿಸಿರುವ ಸಿ.ಎಫ್.ಎಲ್.ಟಿ.ಸಿ.ಯ ಚಟುವಟಿಕೆಗೆ ತೊಡಕಾಗದಂತೆ ಕೋವಿಡ್ ಮಾನದಂಡಗಳನ್ನು ಪಾಲಿಸಿ ಎಂ.ಸಿ.ಎ. ಪರೀಕ್ಷೆ ನಡೆಸಲು ಮಂಜೂರಾತಿ ನೀಡಬಹುದು ಎಂದು ಜಿಲ್ಲಧಿಕಾರಿ ತಿಳಿಸಿದರು. ಸುಳ್ಯಪದವು ಗಡಿ ಮೂಲಕ ನಾಟೆಕಲ್ಲಿಗೆ ಅಕ್ರಮವಾಗಿ ಕರ್ನಾಟಕದ ಟ್ಯಾಕ್ಸಿಗಳು ಸಂಚಾರ ನಡೆಸುತ್ತಿರುವ ಬಗ್ಗೆ ಮಾಹಿತಿ ಲಭಿಸಿದ್ದು, ಈ ಬಗ್ಗೆ ತಪಾಸಣೆ ನಡೆಸಿ ಕ್ರಮ ಕೈಗೊಳ್ಳಲು ಆರ್.ಟಿ.ಒ.ಗೆ ಸಭೆ ಆದೇಶ ನೀಡಿದೆ.
ಜಿಲ್ಲಾ ವೈದ್ಯಾಧಿಕಾರಿ ಅವರ ವರದಿಯ ಹಿನ್ನೆಲೆಯಲ್ಲಿ ಅಲ್ಲದೆ ಸರಕಾರಿ ಸಿಬ್ಬಂದಿ ಕ್ವಾರೆಂಟೈನ್ಗೆ ಪ್ರವೇಶಿಸಲು ಕಚೇರಿಯ ಮುಖ್ಯಸ್ಥರು ರಜೆ ಮಂಜೂರುಮಾಡಕೂಡದು ಎಂದು ಜಿಲ್ಲಾಧಿಕಾರಿ ಸಭೆಯಲ್ಲಿ ತಿಳಿಸಿದರು. ಈ ಆದೇಶ ಉಲ್ಲಂಘಿಸಿ ಕ್ವಾರೆಂಟೈನ್ಗೆ ತೆರಳಿದ ಸಿಬಂದಿ ವಿರುದ್ಧ ಕಚೇರಿಗೆ ಹಾಜರಾಗದೇ ಇರುವ ಆರೋಪದಲ್ಲಿ ಕ್ರಮ ಕೈಗೊಳ್ಳಲಾಗುವುದುಕೋವಿಡ್ ಪಾಸಿಟಿವ್ ಆಗಿರುವ ವ್ಯಕ್ತಿಯ ನೇರ ಸಂಪರ್ಕ ಎಂಬುದು ಒಂದೂವರೆ ಮೀಟರ್ ಅಂತರದಲ್ಲಿ 15 ನಿಮಿಷಕ್ಕೂ ಅಧಿಕ ಅವಧಿಯಲ್ಲಿ ಮಾಸ್ಕ್ ಇಲ್ಲದೇ ಸಂಪರ್ಕದಲ್ಲಿದ್ದರೆ ಮಾತ್ರ ಕ್ವಾರೆಂಟೈನ್ಗೆ ತೆರಳುವ ಅಗತ್ಯಬರುತ್ತದೆ. ಜೊತೆಗೆ ಸರಕಾರಿ ಸಿಬ್ಬಂದಿ ಕೋವಿಡ್ ಸಂಹಿತೆ ಪಾಲಿಸದೇ ಇಂಥಾ ಸಂಪದರ್ಭದಲ್ಲಿ ಸಂಪರ್ಕದಲ್ಲಿದ್ದುದು ಪತ್ತೆಯಾದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು. ಕ್ವಾರೆಂಟೈನ್ ಗೆ ತೆರಳಬೇಕಾದವರಿಗೆ ಅರ್ಹವಾದ ರಜೆ ಮಾತ್ರ ಮಂಜೂರುಮಾಡಬೇಕು. ವಿಶೇಷ ಕ್ಯಾಷ್ವುಲ್ ಲೀವ್ ಮಂಜೂರು ಮಾಡಬೇಕಿಲ್ಲ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಶಿಲ್ಪಾ, ಉಪಜಿಲ್ಲಾಧಿಕಾರಿ ಡಿ.ಆರ್.ಮೇಘಶ್ರೀ, ಜಿಲ್ಲಾ ವೈದ್ಯಾಧಿಕಾರಿ ಎ.ವಿ.ರಾಮದಾಸ್, ಜಿಲ್ಲಾ ವಾರ್ತಾಧಿಕಾರಿ ಮಧುಸೂದನನ್ ಎಂ., ಜಿಲ್ಲಾ ಮಟ್ಟದ ಕೊರೊನಾ ಕೋರ್ ಸಮಿತಿ ಸದಸ್ಯರು ಉಪಸ್ಥಿತರಿದ್ದರು.