ಕಾಸರಗೋಡು, ಅ.31 (DaijiworldNews/PY): ಆದಾಯ ತೆರಿಗೆ ಅಧಿಕಾರಿ ಎಂದು ನಂಬಿಸಿ ಯುವಕನೋರ್ವ ಜ್ಯುವೆಲ್ಲರಿಗೆ ವಂಚಿಸಿದ ಘಟನೆ ಬೆಳಕಿಗೆ ಬಂದಿದ್ದು, ಉಪ್ಪಳ, ಕಾಸರಗೋಡು ಹಾಗೂ ಕಣ್ಣೂರಿನ ಜ್ಯುವೆಲ್ಲರಿಗಳಲ್ಲಿ ಈತ ವಂಚನೆ ನಡೆಸಿದ್ದಾನೆ.

ಕಣ್ಣೂರಿನ ದಿನಗಳ ಹಿಂದೆ ಬಂದಿದ್ದ ಈತ ಸುಮಾರು ಎರಡು ಲಕ್ಷ ರೂ.ಗಳ ಚಿನ್ನಾಭರಣ ವಂಚಿಸಿ ಪರಾರಿಯಾಗಿರುವುದು ಕೃತ್ಯ ಬೆಳಕಿಗೆ ಬಂದಿದೆ.
ಕಣ್ಣೂರು ಬ್ಯಾಂಕ್ ರಸ್ತೆಯ ಜ್ಯುವೆಲ್ಲರಿಯೊಂದಕ್ಕೆ ಬಂದಿದ್ದ ಯುವಕ ತನ್ನ ಹೆಸರು ಮಂಜುನಾಥ್ ಎಂದು ಹೇಳಿದ್ದು, ಆದಾಯ ತೆರಿಗೆ ಅಧಿಕಾರಿ ಎಂದು ಮಾಲಕರಲ್ಲಿ ಹೇಳಿದ್ದಾನೆ.
ಈತ ಸರ ಹಾಗೂ ಉಂಗುರ ಸೇರಿದಂತೆ 42 ಗ್ರಾಂ. ಚಿನ್ನಾಭರಣವನ್ನು ಖರೀದಿಸಿದ್ದು, ಹಣವನ್ನು ಆನ್ ಲೈನ್ ಮೂಲಕ ವರ್ಗಾವಣೆ ಮಾಡುವುದಾಗಿ ತಿಳಿಸಿದ್ದು, ಹಣ ವರ್ಗಾವಣೆ ಮಾಡಿರುವುದಾಗಿ ಕೂಡಲೇ ಮೊಬೈಲ್ನಲ್ಲಿ ಬಂದ ಮೆಸೇಜ್ ಅನ್ನು ಜ್ಯುವೆಲ್ಲರಿ ಮಾಲಕನಿಗೆ ತೋರಿಸಿದ್ದಾನೆ. ಇದರಂತೆ ಚಿನ್ನಾಭರಣ ಪಡೆದು ಈತ ಕಾಲ್ಕಿತ್ತಿದ್ದಾನೆ.
ಕೆಲ ಸಮಯ ಕಳೆದು ಅಕೌಂಟ್ ಪರಿಶೀಲಿಸಿದಾಗ ಹಣ ಬಂದಿಲ್ಲ ಎಂಬುದು ಗಮನಕ್ಕೆ ಬಂದಿದೆ. ಇದರಿಂದ ವಂಚನೆ ಗೊಳಗಾಗಿರುವುದು ಅರಿವಿಗೆ ಬಂದಿದೆ. ಬಳಿಕ ಕಣ್ಣೂರು ಪೊಲೀಸರಿಗೆ ದೂರು ನೀಡಲಾಗಿದ್ದು, ತನಿಖೆ ನಡೆಯುತ್ತಿದೆ.
ಯುವಕ ಹಿಂದಿ ಹಾಗೂ ಇಂಗ್ಲೀಷ್ ಮಿಶ್ರಿತ ಭಾಷೆ ಮಾತನಾಡುತ್ತಿದ್ದ ಎನ್ನಲಾಗಿದೆ. ಈತ ಉಪ್ಪಳದಲ್ಲೂ ಇದೇ ರೀತಿ ವಂಚನೆಗೆ ಮುಂದಾಗಿದ್ದ ಎನ್ನಲಾಗಿದೆ. ಆದರೆ ಮಾಲಕನಿಗೆ ಈತನ ಚಲನವಲನಗಳ ಬಗ್ಗೆ ಸಂಶಯ ಬಂದುದರಿಂದ ಪ್ರಶ್ನಿಸಿದಾಗ ಅಲ್ಲಿಂದ ಕಾಲ್ಕಿತ್ತ ಎನ್ನಲಾಗಿದೆ. ಆರೋಪಿಗಾಗಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.