ಕಾಸರಗೋಡು, ಅ. 31 (DaijiworldNews/MB) : ತಂಡವೊಂದು ಕಾರುಗಳನ್ನು ಹಾನಿಗೊಳಿಸಿ ಗುಂಡು ಹಾರಿಸಿ ಬೆದರಿಸಿದ ಘಟನೆ ಇಂದು ಬೆಳಿಗ್ಗೆ ಬಂದ್ಯೋಡು ಸಮೀಪ ನಡೆದಿದೆ.












ಬಂದ್ಯೋಡು ಬೈದಲ ಎಂಬಲ್ಲಿ ಮನೆಯಂಗಳದಲ್ಲಿ ನಿಲ್ಲಿಸಿದ್ದ ಕಾರನ್ನು ತಂಡವೊಂದು ಹಾನಿಗೊಳಿಸಿದ್ದು, ಬಳಿಕ ಗುಂಡು ಹಾರಿಸಲಾಗಿದೆ.
ಶೇಕಾಲಿ ಎಂಬವರ ಮನೆಯಂಗಳದಲ್ಲಿ ನಿಲ್ಲಿಸಿದ್ದ ಆಲ್ಟೋ ಕಾರನ್ನು ಇನ್ನೊಂದು ಕಾರಿನಲ್ಲಿ ಬಂದ ತಂಡವು ಹಾನಿಗೊಳಿಸಿದೆ. ಶೇಕಾಲಿರವರನ್ನು ವಿಚಾರಿಸಿ ತಂಡವು ಬಂದಿತ್ತು ಎನ್ನಲಾಗಿದೆ.
ಘಟನೆ ಬಗ್ಗೆ ಮಾಹಿತಿ ನೀಡಲು ಶೇಕಾಲಿ ಹಾಗೂ ಮನೆಯವರು ಇನ್ನೊಂದು ಕಾರಿನಲ್ಲಿ ಕುಂಬಳೆ ಪೊಲೀಸ್ ಠಾಣೆಗೆ ತೆರಳುತ್ತಿದ್ದಾಗ ಬೆನ್ನಟ್ಟಿ ಬಂದ ತಂಡವು ಮತ್ತೆ ಕಾರಿನ ಮೇಲೆ ಆಕ್ರಮಣ ನಡೆಸಿದ್ದು, ಈ ನಡುವೆ ದುಷ್ಕರ್ಮಿಗಳು ಬಂದಿದ್ದ ಕಾರು ಅಪಘಾತಕ್ಕೀಡಾಗಿ ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಬಡಿದು ಮಗುಚಿದೆ. ಈ ನಡುವೆ ಇನ್ನೊಂದು ವಾಹನದಲ್ಲಿ ಬಂದ ತಂಡವು ಕಾರಿಗೆ ಗುಂಡು ಹಾರಿಸಿದೆ. ಕೆಲವೇ ಕ್ಷಣದಲ್ಲಿ ದುಷ್ಕರ್ಮಿಗಳು ಇನ್ನೊಂದು ಕಾರಿನಲ್ಲಿ ಪರಾರಿಯಾಗಿದ್ದಾರೆ.
ಸ್ಥಳಕ್ಕಾಮಿಸಿದ ಕುಂಬಳೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಸ್ಥಳದಿಂದ ಒಂದು ತಲವಾರು , ದುಷ್ಕರ್ಮಿಗಳು ಬಂದಿದ್ದ ಟೆಂಪೋ ಪತ್ತೆಯಾಗಿದೆ. ಎರಡು ತಂಡಗಳ ನಡುವಿನ ಹಳೆ ದ್ವೇಷ ಕೃತ್ಯಕ್ಕೆ ಕಾರಣ ಎನ್ನಲಾಗಿದೆ. ಹೆಚ್ಚಿನ ತನಿಖೆ ನಡೆಯುತ್ತಿದೆ.