ಮಂಗಳೂರು, ಅ. 31 (DaijiworldNews/HR): ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಖಾಸಗೀಕರಣಗೊಳಿಸುವ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯ ಪ್ರಕಾರ, ವಿಮಾನ ನಿಲ್ದಾಣದ ನಿರ್ವಹಣೆಯನ್ನು ಅದಾನಿ ಸಮೂಹದ ಕಂಪನಿಯು ವಹಿಸಿಕೊಂಡಿದೆ.

ಅದಾನಿ ಸಂಸ್ಥೆ ಅಕ್ಟೋಬರ್ 30 ರಂದು ಮಧ್ಯರಾತ್ರಿಯಿಂದ ವಿಮಾನ ನಿಲ್ದಾಣದ ನಿರ್ವಹಣೆಯನ್ನು ವಹಿಸಿಕೊಂಡಿದ್ದು, ಅಧಿಕೃತ ಹಸ್ತಾಂತರ ಪ್ರಕ್ರಿಯೆಯು ಇಂದು ನಡೆಯಿತು.
ಅದಾನಿ ಸಂಸ್ಥೆಯ ಉನ್ನತ ಮಟ್ಟದ ಅಧಿಕಾರಿಗಳು ಶನಿವಾರ ಬೆಳಿಗ್ಗೆ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿ, ವಿಮಾನ ನಿಲ್ದಾಣ ನಿರ್ವಹಣೆಯನ್ನು ಹಸ್ತಾಂತರಿಸುವ ಮೊದಲು ಪೂಜೆ ನೆರವೇರಿದ್ದು, ಕೊರೊನಾ ಹಿನ್ನೆಲೆಯಲ್ಲಿ ಕೆಲವು ಜನರು ಮಾತ್ರ ಕಾರ್ಯಕ್ರಮದಲ್ಲಿ ಭಾಗವಹಿಸುವುದಾಗಿ ಮೂಲಗಳು ತಿಳಿಸಿವೆ.
ವಿಮಾನ ನಿಲ್ದಾಣವನ್ನು ಅದಾನಿ ಸಂಸ್ಥೆ ಹಸ್ತಾಂತರಿಸಲಾಗಿದ್ದರೂ, ವಿಮಾನ ನಿಲ್ದಾಣ ಪ್ರಾಧಿಕಾರ ಮತ್ತು ಅದಾನಿ ಸಂಸ್ಥೆ ಎರಡೂ ಒಂದು ವರ್ಷದ ಅವಧಿಗೆ ಸಮನಾಗಿ ಕಾರ್ಯನಿರ್ವಹಿಸಲಿವೆ. ಜಂಟಿ ಕಾರ್ಯಾಚರಣೆಯ ಈ ಒಂದು ವರ್ಷದ ಅವಧಿಯಲ್ಲಿ ಹಣ ವಿನಿಮಯ, ವಿಮಾನ ನಿಲ್ದಾಣದಲ್ಲಿನ ವಾಣಿಜ್ಯ ಚಟುವಟಿಕೆಗಳು, ಲಾಭ ಮತ್ತು ನಷ್ಟವನ್ನು ಅದಾನಿ ಸಂಸ್ಥೆ ನೋಡಿಕೊಳ್ಳುತ್ತದೆ. ವಿಮಾನ ನಿಲ್ದಾಣ ಪ್ರಾಧಿಕಾರವು ವಿಮಾನಗಳ ಆಗಮನ ಮತ್ತು ನಿರ್ಗಮನಕ್ಕೆ ಆದ್ಯತೆ ನೀಡುತ್ತದೆ ಮತ್ತು ಇಡೀ ವ್ಯವಸ್ಥೆಯಲ್ಲಿ ನಿರ್ದೇಶಕರ ಪಾತ್ರವನ್ನು ವಹಿಸುತ್ತದೆ.
ಒಂದು ವರ್ಷದ ನಂತರವೂ ವಿಮಾನಗಳ ಆಗಮನ ಮತ್ತು ನಿರ್ಗಮನವನ್ನು ವಿಮಾನ ನಿಲ್ದಾಣ ಪ್ರಾಧಿಕಾರವು ನಿರ್ವಹಿಸುತ್ತದೆ. ಇದರರ್ಥ ಏರ್ ಟ್ರಾಫಿಕ್ ಕಂಟ್ರೋಲ್ (ಎಟಿಸಿ) ಮತ್ತು ಸಂವಹನ ಮತ್ತು ನ್ಯಾವಿಗೇಷನ್ ಸೆಂಟರ್ ಎರಡನ್ನೂ ವಿಮಾನ ನಿಲ್ದಾಣ ಪ್ರಾಧಿಕಾರವು ನೋಡಿಕೊಳ್ಳುತ್ತದೆ. ಭದ್ರತೆ ಮತ್ತು ವಿಮಾನಯಾನ ಸಿಬ್ಬಂದಿಯನ್ನು ಹೊರತುಪಡಿಸಿ, ಟರ್ಮಿನಲ್ ಕಟ್ಟಡ, ರನ್ವೇ, ವಿದ್ಯುತ್ ಮತ್ತು ನಾಗರಿಕ ಕಾರ್ಯಗಳನ್ನು ಅದಾನಿ ಸಂಸ್ಥೆ ನಿರ್ವಹಿಸುತ್ತದೆ.