ನವ ದೆಹಲಿ, ಮೇ 28: ಸಾವಿನ ದವಡೆಯಲ್ಲಿ ಸಿಲುಕಿಕೊಂಡಿದ್ದ ಓರ್ವ ಹಿಂದೂ ವ್ಯಕ್ತಿಗೆ, ಮುಸ್ಲಿಂ ವ್ಯಕ್ತಿಯೊಬ್ಬ ಉಪವಾಸ ತೊರೆದು ರಕ್ತದಾನ ಮಾಡಿದ ಘಟನೆ ಉತ್ತರಾಖಂಡ್ನ ಡೆಹರಾಡೂನ್ನಲ್ಲಿ ನಡೆದಿದೆ.
ಆರಿಫ್ ಖಾನ್ ರಮ್ಜಾನ್ ಉಪವಾಸ ತೊರೆದು ರಕ್ತ ನೀಡಿ ಹಿಂದೂ ವ್ಯಕ್ತಿಯ ಜೀವ ಉಳಿಸಿ ಮಾನವೀಯತೆ ಮೆರೆದ ಯುವಕ. ಅಜಯ್ ಬೇಲಾವಾಲಮ್ (20) ಕುಷ್ಠರೋಗದಿಂದ ಬಳಲುತ್ತಿದ್ದು, ಆತನ ರಕ್ತಕಣಗಳು ವೇಗವಾಗಿ ಕ್ಷೀಣವಾಗುತ್ತ ಸಾಗಿದ್ದವು. ಈ ವೇಳೆ ಆರಿಫ್ ಖಾನ್ ಆತನ ಪಾಲಿಗೆ ಅಪದ್ಬಾಂಧವನಾಗಿ ಬಂದಿದ್ದರು.
ಅಜಯ್ ಬೇಲಾವಾಲಮ್ ಬದುಕಬೇಕೆಂದರೆ ಎ+ ಗುಂಪಿನ ರಕ್ತದ ಅವಶ್ಯಕತೆಯಿತ್ತು. ಮಗನ ಜೀವ ಉಳಿಸಲು ತಂದೆ ಸಾಮಾಜಿಕ ಜಾಲತಾಣದಲ್ಲಿ “ಮಗನಿಗೆ ಎ+ ರಕ್ತದಾನ ಮಾಡುವವವರು ಮುಂದೆ ಬನ್ನಿ” ಎಂದು ಮನವಿ ಮಾಡಿಕೊಂಡಿದ್ದರು. ಈ ಪೋಸ್ಟ್ ಗಮನಿಸಿದ ಆರಿಫ್ ಖಾನ್ ತಕ್ಷಣ ಅಜಯ್ ಅವರ ತಂದೆಯನ್ನು ಸಂಪರ್ಕಿಸಿ ರಕ್ತದಾನ ಮಾಡಿದ್ದಾರೆ. ಆದರೆ ಈ ವೇಳೆ ಆರೀಫ್ ರಮ್ಜಾನ್ ಉಪವಾಸದಲ್ಲಿದ್ದರು. ಆಸ್ಪತ್ರೆಯಲ್ಲಿ ಆರೀಫ್ಗೆ ವೈದ್ಯರು ರಕ್ತದಾನಕ್ಕಿಂತ ಮೊದಲು ಏನಾದರೂ ತಿನ್ನುವಂತೆ ಹೇಳಿದ್ದರು. ರಮ್ಜಾನ್ ಉಪವಾಸದ ಹಿನ್ನೆಲೆ ಏನನ್ನೂ ತಿನ್ನುವ ಹಾಗಿಲ್ಲ. ಹಾಗೆಯೇ ರಕ್ತ ನೀಡುತ್ತೇನೆ ಎಂದಾಗ ಆರೀಫ್ನ ರಕ್ತ ಪಡೆಯಲು ವೈದ್ಯರು ನಿರಾಕರಿಸಿದ್ದರು.
ಈ ವೇಳೆ ಆರೀಫ್ಗೆ ಧರ್ಮಕ್ಕಿಂತ ಮಾನವೀಯತೆಯೇ ಮಿಗಿಲೆನಿಸಿದ್ದು, ಅನೇಕ ವರ್ಷದಿಂದ ಬಿಡದೇ ಆಚರಿಸಿಕೊಂಡು ಬಂದಿದ್ದ ರಮ್ಜಾನ್ ಉಪವಾಸ ಮುರಿದು ವೈದ್ಯರು ನೀಡಿದ ಆಹಾರ ಸೇವಿಸಿದ್ದಾರೆ. ನಂತರ ಅವರು ರಕ್ತದಾನ ಮಾಡಿ ಅಜಯ್ ಜೀವ ಉಳಿಸಿದ್ದಾರೆ. ಆರೀಫ್ ಮಾಡಿದ ಈ ಸೇವೆಗೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗಿದೆ.