ಕಾಸರಗೋಡು, ಅ.31 (DaijiworldNews/PY): ಬೈಕ್ ಕಳವು ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಬ್ಬರನ್ನು ಆದೂರು ಪೊಲೀಸರು ಬಂಧಿಸಿದ್ದಾರೆ.

ಸಾಂದರ್ಭಿಕ ಚಿತ್ರ
ಬಂಧಿತರನ್ನು ನೆಲ್ಲಿಕಟ್ಟೆಯ ಸುಹೈಲ್ (21) ಹಾಗೂ ಎಡನೀರಿನ ನಿಹಾಲ್ (19) ಎಂದು ಗುರುತಿಸಲಾಗಿದೆ.
ನಿನ್ನೆ ರಾತ್ರಿ ಕುಂಟಾರು ಬಳಿ ಪೊಲೀಸರು ವಾಹನ ತಪಾಸಣೆ ನಡೆಸುತ್ತಿದ್ದ ಸಂದರ್ಭದಲ್ಲಿ ಸುಳ್ಯ ಕಡೆಯಿಂದ ಬರುತ್ತಿದ್ದ ಬೈಕ್ ಪೊಲೀಸರಿಂದ ತಪ್ಪಿಸುವ ಭರದಲ್ಲಿ ನಿಲ್ಲಿಸಿದ್ದ ಬಸ್ಸಿನ ಹಿಂಭಾಗಕ್ಕೆ ಡಿಕ್ಕಿ ಹೊಡೆಯಿತು. ಹಿಂಬದಿಯಲ್ಲಿದ್ದ ನಿಹಾಲ್ ನೆಲಕ್ಕೆ ಬಿದ್ದಿದ್ದು, ಈ ವೇಳೆ ಸುಹೈಲ್ ಬೈಕ್ ಸಹಿತ ಪರಾರಿಯಾದನು. ನಿಹಾಲ್ನನ್ನು ಪೊಲೀಸರು ವಿಚಾರಿಸಿದಾಗ ಮಡಿಕೇರಿಯಿಂದ ಬೈಕ್ ಅನ್ನು ಕಳವು ಮಾಡಿ ತಂದಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ.
ಬಳಿಕ ಪೊಲೀಸರು ತನಿಖೆ ನಡೆಸಿದಾಗ ಚೆರ್ಕಳ ಪೆಟ್ರೋಲ್ ಬಂಕ್ ಸಮೀಪ ಬೈಕ್ ಪತ್ತೆಯಾಗಿದೆ. ನಿಹಾಲ್ನಿಂದ ಮಾಹಿತಿ ಪಡೆದ ಪೊಲೀಸರು ಸುಹೈಲ್ನನ್ನು ಮನೆಯಿಂದ ಬಂಧಿಸಲಾಗಿದೆ.
ಸುಹೈಲ್ 50ಕ್ಕೂ ಅಧಿಕ ಬೈಕ್ ಕಳವು ಪ್ರಕರಣದ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ. ಇಬ್ಬರನ್ನು ಮಡಿಕೇರಿ ಪೊಲೀಸರಿಗೆ ಹಸ್ತಾ೦ತರಿಸಲಾಗಿದೆ.