ಗುರುಪುರ,ಅ. 31 (DaijiworldNews/HR): ಇಂದಿಗೆ ಸರಿ ಸುಮಾರು ನಾಲ್ಕು ತಿಂಗಳ ಹಿಂದೆ ಗುಡ್ಡೆ ಕುಸಿತ ಉಂಟಾಗಿದ್ದ ಪ್ರದೇಶಕ್ಕೆ ಇಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ ವಿ ಹಾಗೂ ಮಂಗಳೂರು ನಗರ ಉತ್ತರ ಶಾಸಕ ಡಾ. ಭರತ್ ಶೆಟ್ಟಿ ಭೇಟಿ ನೀಡಿ, ಸಂತ್ರಸ್ತರ ಅಹವಾಲು ಸ್ವೀಕರಿಸಿ ಪರಿಹಾರಗಳ ಬಗ್ಗೆ ವಿಸ್ತೃತ ಚರ್ಚಿಸಿದರು.



ಗುಡ್ಡ ಕುಸಿತದ ಬಳಿಕ ಸಂತ್ರಸ್ತರಾಗಿದ್ದು, ಬಾಡಿಗೆ ಮನೆಯಲ್ಲಿರುವವರಿಗೆ ಶೀಘ್ರ ಪರಿಹಾರ ಸಿಗಬೇಕು. ಈ ನಿಟ್ಟಿನಲ್ಲಿ ನಿಜವಾದ ನೊಂದವವರ ಪಟ್ಟಿ ತಯಾರಿಸಿ, ನನಗೆ ಕಳುಹಿಸಿ. ಆ ಪಟ್ಟಿಯಲ್ಲಿ ಅಕೌಂಟೇಬಿಲಿಟಿ ಇರಬೇಕು. ಸಂತ್ರಸ್ತರಿಗೆ ರಾಜೀವ್ ಗಾಂಧಿ ಹೌಸಿಂಗ್ ಬೋರ್ಡಿನಿಂದ ಸಿಗುವ ನೆರವಿಗೆ ಪ್ರಯತ್ನಿಸುವೆ. ಸರ್ಕಾರದ ಮಟ್ಟದಲ್ಲಿ ಮಾನ್ಯ ಶಾಸಕ ಡಾ. ಭರತ್ ಶೆಟ್ಟಿ ಪ್ರಯತ್ನಿಸಲಿದ್ದಾರೆ ಎಂದರು.
ಎಲ್ಲೇ ಆಗಲಿ ಗುಡ್ಡ-ಬೆಟ್ಟ ಪ್ರದೇಶಗಳಲ್ಲಿ ತೋಡು ಮಾಡಿಕೊಂಡು ವಸತಿ ವ್ಯವಸ್ಥೆಗೆ ಮುಂದಾಗುವುದು ಅವೈಜ್ಞಾನಿಕವಾಗುತ್ತದೆ ಮತ್ತು ಅದು ಅಪಾಯಕಾರಿ. ಭವಿಷ್ಯದಲ್ಲಿ ಇಂತಹ ದುರ್ಘಟನೆ ಸಂಭವಿಸಿದರೆ ಪಂಚಾಯತ್ ಅಧಿಕಾರಿಗಳು ಜವಾಬ್ದಾರರಾಗುತ್ತಾರೆ. ಆದ್ದರಿಂದ ಭವಿಷ್ಯದ ಪರಿಣಾಮಗಳೇನು ಎಂಬುದುರ ಬಗ್ಗೆ ಮುಂದಾಲೋಚನೆಯಿಂದ ಕೆಲಸ ಮಾಡಬೇಕು ಎಂದು ಗುರುಪುರ ಪಿಡಿಒಗೆ ಜಿಲ್ಲಾಧಿಕಾರಿ ಸೂಚಿಸಿದರು.
ಗುರುಪುರ ಮಠದಗುಡ್ಡೆ ಸೈಟಿನ ಸಂತ್ರಸ್ತರಿಗೆ ಗಂಜಿಮಠ ಗ್ರಾಂ. ಪಂಚಾಯತ್ ನ ಮೊಗರು ಗ್ರಾಮದಲ್ಲಿ 1.5 ಎಕ್ರೆ ಜಾಗ ಗುರುತಿಸಲಾಗಿದ್ದು, ಈ ಬಗ್ಗೆ ಕಾನೂನಾತ್ಮಕ ಪ್ರಕ್ರಿಯೆ ಆರಂಭಗೊಂಡಿದೆ. ಇದೇ ಗ್ರಾಮದ ಮತ್ತೊಂದೆಡೆ 2.5 ಎಕ್ರೆ ಜಾಗ ಗುರುತಿಸಲಾಗಿದೆ. ಗುರುಪುರ ಗ್ರಾಪಂ ವ್ಯಾಪ್ತಿಯಲ್ಲಿ ಸೂಕ್ತ ಜಾಗ ಇಲ್ಲ ಎಂದು ಮಂಗಳೂರು ತಹಶೀಲ್ದಾರ್ ಗುರುಪ್ರಸಾದ್ ಹೇಳಿದರು.
ವರ್ಷಗಳಿಂದ ಒಂದೆಡೆ ಇದ್ದು, ಕಾರಣಾಂತರಗಳಿಂದ ಏಕಾಏಕಿಯಾಗಿ ಬೇರೆಡೆಗೆ ಸ್ಥಳಾಂತರಗೊಳ್ಳಲು ಕಷ್ಟವಾಗುತ್ತದೆ ಎಂಬುದು ಸತ್ಯ. ಆದರೆ ಈಗಾಗಲೇ ಕಷ್ಟ ಅನುಭವಿಸಿರುವ ನೀವು ಮತ್ತೆ ಇಲ್ಲೇ ಮನೆ ಕಟ್ಟಿಕೊಂಡು ಕಷ್ಟ ಅನುಭವಿಸುತ್ತೀರಾ? ಆದ್ದರಿಂದ ಇಲ್ಲಿ ಭವಿಷ್ಯದಲ್ಲಿ ಶಾಶ್ವತ ಮನೆ ನಿರ್ಮಿಸುವ ಸಾಧ್ಯತೆ ಕಡಿಮೆ ಇದೆ. ಬೇರೆಡೆಗೆ ಹೋಗುವುದು ಅನಿವಾರ್ಯವಾಗಬಹುದು. ರೆಡ್ ಝೋನ್, ಯೆಲ್ಲೋ ಎಂಬುದು ಸದ್ಯದ ಪರಿಹಾರಕ್ಕೆ ಮಾಡಲಾದ ವ್ಯವಸ್ಥೆ. ಆದರೆ ಮಳೆಗಾಲದಲ್ಲಿ ನಮ್ಮ ನಿರೀಕ್ಷೆಗಳೆಲ್ಲ ಹುಸಿಯಾಗಬಹುದು ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ.
ಸಂತ್ರಸ್ತರೊಂದಿಗೆ ಜಿಪಂ ಸದಸ್ಯ ಯು ಪಿ ಇಬ್ರಾಹಿಂ, ತಾಪಂ ಸದಸ್ಯ ಸಚಿನ್ ಅಡಪ, ಸಹಾಯಕ ಆಯುಕ್ತ ರವಿಚಂದ್ರ ನಾಯಕ್, ಉಪತಹಶೀಲ್ದಾರ್ ಶಿವಪ್ರಸಾದ್, ಕಂದಾಯ ನಿರೀಕ್ಷಕ ಆಸೀಫ್, ವಿಎ, ಪಿಡಿಒ ಅಬೂಬಕ್ಕರ್, ಬಿಜೆಪಿ ಮುಖಂಡರಾದ ರಾಜೇಶ್ ಸುವರ್ಣ, ಶ್ರೀಕರ ಶೆಟ್ಟಿ, ಸೋಮಯ್ಯ, ನಳಿನಿ ಶೆಟ್ಟಿ, ಸೇಸಮ್ಮ, ಜಲಜಾ ಮತ್ತಿತರರು ಉಪಸ್ಥಿತರಿದ್ದರು.