ಮಂಗಳೂರು, ಅ.31 (DaijiworldNews/PY): "ಭಾರತವು ವಿಶ್ವಕ್ಕೆ ಆಧ್ಯಾತ್ಮದ ಬೆಳಕು ನೀಡಿದ ದೇಶ. ವ್ಯಕ್ತಿ ಮತ್ತು ಪ್ರಕೃತಿ ಎರಡರಲ್ಲಿ ದೇವರನ್ನು ಕಂಡಿರುವ ದೇಶ ಇದಾಗಿದೆ. ರಾಮಾಯಾಣದ ಮೂಲಕ ಆಧ್ಯಾತ್ಮವನ್ನು ಪ್ರಪಂಚಕ್ಕೆ ಸಾರಿದ ಮಹಾನ್ ಜ್ಞಾನಿಯೇ ಮಹರ್ಷಿ ವಾಲ್ಮೀಕಿ" ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು.


ಶನಿವಾರ ಜಿಲ್ಲಾಧಿಕಾರಿ ಕಚೇರಿಯ ಸಂಭಾಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಆಯೋಜಿದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, "ನಿತ್ಯದ ಜೀವನದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಆದರ್ಶಗಳನ್ನು ಪಾಲಿಸಿಕೊಂಡು ನಾವು ಮುನ್ನಡೆಯಬೇಕು. ಅವರ ಆದರ್ಶಗಳಿಂದ ನಾವು ಸ್ಫೂರ್ತಿ ಪಡೆಯಬಹುದಾಗಿದೆ" ಎಂದರು.
ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ಮಾತನಾಡಿ, "ರಾಮಾಯಣವನ್ನು ಧಾರ್ಮಿಕ ಗ್ರಂಥವಾಗಿ ನೋಡದೇ ಅದರಲ್ಲಿರುವ ಅಂಶಗಳನ್ನು ನಾವೆಲ್ಲರೂ ನಮ್ಮ ಜೀವನದಲ್ಲಿ ಆದರ್ಶವಾಗಿ ಪಾಲಿಸಿಕೊಂಡು ಮುಂದೆ ಸಾಗಬೇಕು. ರಾಮಾಯಣದಲ್ಲಿ ಅನಾದಿಕಾಲದಿಂದ ನಮ್ಮ ಇಂದಿನ ಜೀವನ ಶೈಲಿಯನ್ನು ತಿಳಿಸಿದ ಮಹಾನ್ ಜ್ಞಾನಿ ಶ್ರೀ ಮಹರ್ಷಿ ವಾಲ್ಮೀಕಿ. ಮನಸ್ಸಿನಲ್ಲಿ ಬದಲಾವಣೆ ಮಾಡಿಕೊಂಡಿರೆ ಎಂತಹ ಮಹಾಕಾವ್ಯಗಳನ್ನು ರಚನೆ ಮಾಡಬಹುದು ಎನ್ನುವುದಕ್ಕೆ ಸ್ವಷ್ಟ ನಿದರ್ಶನವೇ ಅವರು" ಎಂದರು.
ಕಾರ್ಯಕ್ರಮದಲ್ಲಿ ಶಾಸಕ ಡಾ. ಭರತ್ ವೈ ಶೆಟ್ಟಿ, ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ ಕತ್ತಲ್ ಸಾರ್, ಅಪರ ಜಿಲ್ಲಾಧಿಕಾರಿ ರೂಪಾ ಎಮ್.ಜೆ. ವಿವಿಧ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳು ಮತ್ತಿತರು ಉಪಸ್ಥಿತರಿದ್ದರು.