ಕುಂದಾಪುರ, ಅ. 31 (DaijiworldNews/HR): ಆತ್ಮನಿರ್ಭರ ಭಾರತ್, ಸ್ವಾವಲಂಬಿ ಭಾರತದ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರು ಕನಸು ಕಂಡು ಅದನ್ನು ದೇಶದೆಲ್ಲೆಡೆ ಅನುಷ್ಠಾನ ಮಾಡಲು ಕರೆ ನೀಡಿದರು. ಆದರೆ ಬೈಂದೂರು ಕ್ಷೇತ್ರದ ಶಾಸಕರು ಇದನ್ನು ವಿರೋಧಿಸುತ್ತಾ, ಹೊಲಿಗೆ ವೃತ್ತಿಯ ಮೂಲಕ 70 ಜನ ಮಹಿಳೆಯರು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಹೊರಟರೆ ಅವರನ್ನು ಬೀದಿ ಪಾಲು ಮಾಡಿದ ಶಾಸಕರ ಮೇಲೆ ಬಿಜೆಪಿಗರೆ ಕ್ರಮ ಕೈಗೊಳ್ಳಿ. ಇಲ್ಲದಿದ್ದರೆ ಪ್ರಧಾನಿಗಳ ಕರೆ ಬೆಲೆಯೇ ಇರುವುದಿಲ್ಲ. ಇವತ್ತು ಬೈಂದೂರು ಕ್ಷೇತ್ರದಲ್ಲಿ ಈ ಅನ್ಯಾಯದ ವಿರುದ್ಧ ಧರ್ಮ ಯುದ್ಧ ನಡೆಯುತ್ತದೆ. ಈ ಯುದ್ಧದಲ್ಲಿ ಶಾಸಕರಿಗೆ ಅಪಜಯವಾಗುವುದು ಖಚಿತ ಎಂದು ಉಡುಪಿ ಜಿಲ್ಲಾ ರೈತ ಸಂಘದ ವಕ್ತಾರ ವಿಕಾಸ್ ಹೆಗ್ಡೆ ಹೇಳಿದರು.




ವಂಡ್ಸೆ ಗ್ರಾಮ ಪಂಚಾಯತ್ನ ಎಸ್.ಎಲ್.ಆರ್.ಎಂ ಘಟಕದ ಅಧೀನ ಸಂಸ್ಥೆಯಾದ ‘ಸ್ವಾವಲಂಬನಾ’ ವೃತ್ತಿ ತರಬೇತಿ ಕೇಂದ್ರವನ್ನು ಕಾನೂನು ಬಾಹಿರವಾಗಿ ತೆರವು ಮಾಡಿರುವುದು ಖಂಡಿಸಿ ಕುಂದಾಪುರ ತಾಲ್ಲೂಕು ಪಂಚಾಯತ್ ರಾಜ್ ಒಕ್ಕೂಟ ಹಾಗೂ ವಿವಿಧ ಸಂಘಟನೆಗಳ ಸಹಕಾರದೊಂದಿಗೆ ಕಂಡ್ಲೂರು ಪೇಟೆಯಲ್ಲಿ ನಡೆದ 8ನೇ ಸರಣಿ ಸತ್ಯಾಗ್ರಹ ಉದ್ದೇಶಿಸಿ ಅವರು ಮಾತನಾಡಿದರು.
ಬೈಂದೂರು ಕ್ಷೇತ್ರದ ಶಾಸಕರಿಗೆ ಸಾಮಾಜಿಕ ನ್ಯಾಯ ಎಂದರೆ ಏನು ಅಂತ ಗೊತ್ತಿಲ್ಲ, ಪಂಚಾಯತ್ ರಾಜ್ ಕಾಯ್ದೆ ಬಗ್ಗೆ ಗೌರವವಿಲ್ಲ. ಎಸ್.ಎಲ್.ಆರ್ ಎಂ ವಿಚಾರದಲ್ಲಿ ಭರವಸೆ ಇಲ್ಲದಿರುವುದನ್ನು ಕಾಣುತ್ತೇವೆ. ಇವತ್ತು ಬೈಂದೂರು ಕ್ಷೇತ್ರದಲ್ಲಿ ನಡೆಯುತ್ತಿರುವ ಅಕ್ರಮ, ದೌರ್ಜನ್ಯವನ್ನು ಖಂಡಿಸಲೇ ಬೇಕಾಗಿದೆ. ಒಡೆದು ಆಳುವ ನೀತಿ ಹೆಚ್ಚುತ್ತಿದೆ. ಸಮಾಜದಲ್ಲಿ ಶಾಂತಿ ಕದಡುವ ಕೆಲಸವನ್ನು ಮಾಡಲಾಗುತ್ತಿದೆ. ಸ್ವ ಉದ್ಯೋಗ, ಸ್ವಾವಲಂಬಿ ಜೀವನ ನಡೆಸುವವರಿಗೆ ಪ್ರೋತ್ಸಾಹ ಸಿಗುತ್ತಿಲ್ಲ. ಗುತ್ತಿಗೆದಾರರಿಗೆ ಅನಗತ್ಯ ಕಿರುಕುಳ ನೀಡಲಾಗುತ್ತಿದೆ. ಇದನ್ನೆಲ್ಲಾ ಕಣ್ಣು ಮುಚ್ಚಿ ಕುಳಿತುಕೊಳ್ಳಲು ಆಗುತ್ತಿಲ್ಲ.ವಂಡ್ಸೆಯ ಸ್ವಾವಲಂಬಿ ಕೇಂದ್ರವನ್ನು ತೆರವು ಗೊಳಿಸಿದ ಪ್ರಕರಣ ಇದಕ್ಕೆಲ್ಲಾ ಒಂದು ಉದಾಹರಣೆಯಾಗಿದೆ ಎಂದರು.
ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಮಾತನಾಡಿ, ರಾಜ್ಯದಲ್ಲಿ ಯಾವುದೇ ಯೋಜನೆ ಬಂದರೂ ಅದನ್ನು ಉಡುಪಿ ಜಿಲ್ಲೆಯಲ್ಲಿಯೇ ಹೆಚ್ಚು ಪ್ರಯೋಗಕ್ಕೆ ಒಳಪಡುತ್ತದೆ. ಎಸ್.ಎಲ್.ಆರ್.ಎಂ ಕೂಡಾ ಉಡುಪಿ ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ಮಾದರಿಯಾಗಿ ಮಾಡಿ ತೋರಿಸಿದ್ದು ವಂಡ್ಸೆ ಗ್ರಾಮ ಪಂಚಾಯತ್. ಆದರೆ ಉದಯ ಕುಮಾರ್ ಶೆಟ್ಟಿ ತನ್ನ ಪಕ್ಷಕ್ಕೆ ಬರಲಿಲ್ಲ ಎನ್ನುವ ಕಾರಣಕ್ಕೆ ಅವರ ಮೇಲಿನ ಹಗೆಯಿಂದ ಸ್ವಾವಲಂಬನಾ ಕೇಂದ್ರವನ್ನು ತೆರವು ಮಾಡಿಸಲು ಮುಂದಾಗಿರುವುದು ಖಂಡನಾರ್ಹ. ಪಂಚಾಯತ್ ರಾಜ್ ಕಾಯ್ದೆಯಲ್ಲಿ ಸಂಜೆ 6 ಗಂಟೆಯಿಂದ ಬೆಳಿಗ್ಗೆ 6 ಗಂಟೆಯ ತನಕ ಯಾವುದೆ ತೆರವು ಇತ್ಯಾದಿ ಕಾರ್ಯ ಮಾಡಬಾರದಂತಿದೆ. ಆದರೆ ಸಂಜೆ 7 ಗಂಟೆಯಿಂದ ಸ್ವಾವಲಂಬನಾ ಕೇಂದ್ರವನ್ನು ತೆರವು ಮಾಡಲಾಗುತ್ತದೆ. ತನಿಖೆಗೆ ಹಾಕುತ್ತಾರೆ. ನಮಗೆ ನ್ಯಾಯಾಂಗದ ಮೇಲೆ ವಿಶ್ವಾಸವಿದೆ. ಅಗತ್ಯ ದಾಖಲೆಗಳು ನಮ್ಮ ಬಳಿ ಇವೆ. ಅದನ್ನು ನ್ಯಾಯಾಲಯಕ್ಕೆ ಸಲ್ಲಿಸುತ್ತೇವೆ.
ಬೈಂದೂರು ಕ್ಷೇತ್ರಕ್ಕೆ ಮೆಡಿಕಲ್ ಕಾಲೇಜು, ಪದವಿ ಕಾಲೇಜು, ಇಂಜಿನಿಯರಿಂಗ್ ಕಾಲೇಜು, ಒತ್ತಿನಣೆಯಲ್ಲಿ ವಿಮಾನ ನಿಲ್ದಾಣ ತರುತ್ತೇನೆ ಎಂದು ಸುಳ್ಳು ಹೇಳಿ, ಜನರ ದಾರಿ ತಪ್ಪಿಸಿ ಗೆಲುವು ಪಡೆದಿರಿ. ಈಗ ಎಲ್ಲಿ ಹೋಯಿತು ನಿಮ್ಮ ಭರವಸೆಗಳು ಎಂದು ಶಾಸಕರಿಗೆ ಪ್ರಶ್ನೆ ಹಾಕಿದರು.
ಪಂಚಾಯತ್ ರಾಜ್ ಒಕ್ಕೂಟದ ಅಧ್ಯಕ್ಷ ಉದಯಕುಮಾರ ಶೆಟ್ಟಿ ಅಡಿಕೆಕೊಡ್ಲು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕುಂದಾಪುರ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಶಿವರಾಮ ಶೆಟ್ಟಿ ಮಲ್ಯಾಡಿ, ತಾ.ಪಂ.ಸದಸ್ಯೆ ಜ್ಯೋತಿ ಪುತ್ರನ್, ಅಂಬಿಕಾ, ಅಂಪಾರು ಗ್ರಾ.ಪಂ.ಮಾಜಿ ಅಧ್ಯಕ್ಷ ಕಿರಣ್ ಹೆಗ್ಡೆ, ತಾ.ಪಂ.ಮಾಜಿ ಸದಸ್ಯ ಶೇಷು ನಾಯ್ಕ, ಮುನಾಫ್ ಗುಲ್ವಾಡಿ, ದಸ್ತಗೀರ್ ಸಾಹೇಬ್, ಸ್ವಾವಲಂಬನಾ ಕೇಂದ್ರದ ಮಹಿಳೆಯರು ಉಪಸ್ಥಿತರಿದ್ದರು.