ಬೆಂಗಳೂರು, ಮೇ 28 : ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದು ದಿನ ಕಳೆಯುತ್ತಿದ್ದಂತೆ, ಸಚಿವ ಸಂಪುಟ ವಿಸ್ತರಣೆ ಕಗ್ಗಂಟಾಗಿ ಪರಿಣಮಿಸುತ್ತಿದೆ. ಮುಖ್ಯಮಂತ್ರಿ ಸ್ಥಾನ ಜೆಡಿಎಸ್ ಗೆ ಬಿಟ್ಟುಕೊಟ್ಟಿದ್ದ ಕಾಂಗ್ರೆಸ್ ಪ್ರಮುಖ ಖಾತೆ ತನಗೆ ನೀಡುವಂತೆ ಖ್ಯಾತೆ ತೆಗೆದಿದೆ. ಅದರೆ ಪ್ರಮುಖ ಖಾತೆಗೆ ಬಿಟ್ಟುಕೊಡಲು ಸಾಧ್ಯವಿಲ್ಲ ಎಂದು ಜೆಡಿಎಸ್ ಪಟ್ಟು ಹಿಡಿದಿದೆ. ಹೀಗಾಗಿ ಖಾತೆ ಹಂಚಿಕೆ ಬಿಕ್ಕಟ್ಟು ದೆಹಲಿಗೆ ವರ್ಗಾವಣೆಯಾಗಿದೆ.
ಸರ್ಕಾರ ರಚನೆ ಮಾಡಲು ಯಾವುದೇ ಷರತ್ತು ಇಲ್ಲದೆ, ಬೇಷರತ್ ಬೆಂಬಲ ನೀಡಿದ್ದೇವೆ ಎನ್ನುವ ಕಾಂಗ್ರೆಸ್ ಈಗ ಹೊಸ-ಹೊಸ ಬೇಡಿಕೆ ಮುಂದಿಡುತ್ತಿದೆ. ಹಣಕಾಸು ಸೇರಿದಂತೆ ಪ್ರಮುಖ 5 ಖಾತೆಗಳಿಗೆ ಕಾಂಗ್ರೆಸ್ ಬೇಡಿಕೆ ಇಟ್ಟಿದೆ.
2004ರಲ್ಲಿ ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದಾಗ ಮುಖ್ಯಮಂತ್ರಿ ಸ್ಥಾನವನ್ನು ಇಟ್ಟುಕೊಂಡು ಉಪ ಮುಖ್ಯಮಂತ್ರಿ, ಹಣಕಾಸು ಖಾತೆಯನ್ನು ಬಿಟ್ಟುಕೊಟ್ಟಿದ್ದೇವೆ. ಹಾಗಾಗಿ ಈ ಸಾರಿ ಸಂಪುಟದಲ್ಲಿ ಪ್ರಮುಖ ಖಾತೆಗಳು ನಮಗೆ ಬೇಕು ಎಂದು ಜೆಡಿಎಸ್ ಪಟ್ಟು ಹಿಡಿದಿದೆ. ಹೀಗಾಗಿ ಎರಡು ಪಕ್ಷದಲ್ಲಿ ಹಗ್ಗ-ಜಗ್ಗಾಟ ಮುಂದುವರಿದಿದೆ.