ಬಂಟ್ವಾಳ, ಅ. 31 (DaijiworldNews/HR,MB): ಬಂಟ್ವಾಳದ ಭಂಡಾರಿಬೆಟ್ಟುವಿನ ವಸ್ತಿ ಅರ್ಪಾಟ್ಮೆಂಟ್ನಲ್ಲಿ ಸುರೇಂದ್ರ ಬಂಟ್ವಾಳ್ ಗೆ ಸೇರಿದ ಪ್ಲಾಟ್ನಲ್ಲಿ ಸುರೇಂದ್ರ ಬಂಟ್ವಾಳ್ ನನ್ನು ದುಷ್ಕರ್ಮಿಗಳು ಕೊಚ್ಚಿ ಕೊಲೆ ನಡೆಸಿದ ಘಟನೆಗೆ ಸಂಬಂಧಿಸಿ ಒಟ್ಟು ಒಂಬತ್ತು ಮಂದಿ ಆರೋಪಿಗಳನ್ನು ಬಂಟ್ವಾಳ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಪೊಲೀಸರು ಸತೀಶ್ ಕುಲಾಲ್, ಗಿರೀಶ್ ಕಿನ್ನಿಗೋಳಿ, ಆಕಾಶ್ ಭವವ್ ಶರಣ್, ವೆಂಕಟೇಶ್ ಪೂಜಾರಿ, ಪ್ರದೀಪ್, ಶರೀಫ್, ದಿವರಾಜ್, ರಾಜೇಶ್ ಮತ್ತು ಅನಿಲ್ ಪಂಪ್ವೆಲ್ನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಇನ್ನು ಈ ಪ್ರಕರಣದಲ್ಲಿ ಆರೋಪಿ ಸತೀಶ್ ಕುಲಾಲ (39) ಎಂಬಾತನು ಭಾಗಿಯಾಗಿರುವುದು ತನಿಖೆಯ ವೇಳೆ ಪತ್ತೆಯಾಗಿದೆ. ಆತನೊಂದಿಗೆ ಮತ್ತೋರ್ವ ಆರೋಪಿ ಮಂಗಳೂರಿನ ಬೊಂಡಂತಿಲ ಗ್ರಾಮದ ಗಿರೀಶ್ (28) ಎಂಬಾತನು ಭಾಗಿಯಾಗಿದ್ದಾನೆ ಎಂದು ತಿಳಿದು ಬಂದಿದೆ. ಈತನು ಕಿಶನ್ ಹೆಗ್ಡೆಯ ಆಪ್ತ ಎಂದು ಹೇಳಲಾಗಿದೆ.
ಇನ್ನು ಈ ಪ್ರಕರಣದ ಪ್ರಮುಖ ಆರೋಪಿ ಸತೀಶ್ ಕುಲಾಲ್ನನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ ಆತನು ಸುರೇಂದ್ರ ಬಂಟ್ವಾಳ್ ಹತ್ಯೆಗೆ ಪ್ರದೀಪ್ ಕುಮಾರ್ ಆಲಿಯಾಸ್ ಪಪ್ಪು, ಶರೀಪ್ ಆಲಿಯಾಸ್ ಸಯ್ಯದ್ ಶರೀಪ್, ವೆಂಕಪ್ಪ ಪೂಜಾರಿ ಆಲಿಯಾಸ್ ವೆಂಕಟೇಶ ಮತ್ತು ಕೇಂದ್ರ ಕಾರಾಗೃಹ ಬೆಂಗಳೂರಿನಲ್ಲಿರುವ ಆಕಾಶಭವನ ಶರಣ್ನ ಒಳಸಂಚು ನಡೆಸಿ ಕೃತ್ಯ ನಡೆಸಲು ಸೂಚಿಸಿದ್ದಾರೆ ಎಂದು ತಿಳಿಸಿದ್ದಾನೆ ಎನ್ನಲಾಗಿದೆ.
ಆರೋಪಿಗಳನ್ನು ಬಂಧಿಸಿ ಪ್ರಶ್ನಿಸಲಾಗಿದೆ. ಪ್ರದೀಪ್ ಕುಮಾರ್ ಅಲಿಯಾಸ್ ಪಪ್ಪು ಮೃತ ಸುರೇಂದ್ರ ಬಂಟ್ವಾಲ್ನ ಸ್ನೇಹಿತನಾಗಿದ್ದನು. ಆತನಿಂದ ತನ್ನ ಚಿನ್ನದ ಅಂಗಡಿ ಉದ್ಯಮಕ್ಕಾಗಿ ಈ ಹಿಂದೆ ಹಣವನ್ನು ಪಡೆದಿದ್ದನು. ಅದರಲ್ಲಿ ಸುಮಾರು 7 ಲಕ್ಷ ರೂ.ಯನ್ನು ಇನ್ನು ವಾಪಾಸ್ ನೀಡಿರಲಿಲ್ಲ. ಈ ಕಾರಣದಿಂದಾಗಿ ಹತ್ಯೆಗೈಯಲಾಗಿದೆ ಎಂದು ವಿಚಾರಣೆಯಲ್ಲಿ ತಿಳಿದು ಬಂದಿದೆ. ಇನ್ನು ಸುರೇಂದ್ರನನ್ನು ಹತ್ಯೆ ಮಾಡಲು ಶರಣ್ಗೆ ಆತನ ಪರಿಚಿತ ವ್ಯಕ್ತಿ ಎರಡು ಲಕ್ಷ ರೂ. ನೀಡಿದ್ದು ಆ ಆರೋಪಿಯ ಬಂಧನ ಇನ್ನಷ್ಟೇ ನಡೆಯಬೇಕಾಗಿದೆ.
ಆರೋಪಿ ವೆಂಕಪ್ಪ ಪೂಜಾರಿ ಅಲಿಯಾಸ್ ವೆಂಕಟೇಶ್ ಕೂಡ ಸುರೇಂದ್ರ ಬಂಟ್ವಾಳ್ನಿಂದ ಸಾಲ ಪಡೆದಿದ್ದನು. ಇದರಲ್ಲಿ ಸ್ವಲ್ಪ ಪ್ರಮಾಣದ ಹಣವನ್ನು ಇನ್ನು ಹಿಂದಿರುಗಿಸಿರಲಿಲ್ಲ. ಇನ್ನು ಈ ವೆಂಕಪ್ಪ ಈ ಹತ್ಯೆ ನಡೆಸಲು ಸತೀಶ್ ಕುಲಾಲ್ಗೆ ಮುಂಚಿತವಾಗಿ 90,000 ರೂ. ನೀಡಿದ್ದಾನೆ. ಆರೋಪಿ ಶರೀಪ್ ಅಲಿಯಾಸ್ ಸಯ್ಯದ್ ಶರೀಪ್ ಮೃತ ಸುರೇಂದ್ರ ಬಂಟ್ವಾಲ್ರೊಂದಿಗೆ ವೈಯಕ್ತಿಕ ದ್ವೇಷ ಹೊಂದಿದ್ದನು. ಆ ಕಾರಣದಿಂದಾಗಿ ಈ ಹತ್ಯೆಗೆ ಸಹಕಾರ ನೀಡಿದ್ದಾನೆ.
ಇನ್ನು ಬೆಂಗಳೂರು ಜೈಲಿನಲ್ಲಿದ್ದ ಆಕಾಶ್ಭವನ್ ಶರಣ್ನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ. ಸುರೇಂದ್ರರೊಂದಿಗೆ ವೈಯಕ್ತಿಕ ದ್ವೇಷವಿತ್ತು. ಈ ಕಾರಣದಿಂದಾಗಿ ಎಲ್ಲಾ ಆರೋಪಿಗಳಿಗೆ ಕಿಶನ್ ಹಗ್ಡೆ ಹತ್ಯೆಗೆ ಪ್ರತೀಕಾರ ತೀರಿಸಲು ಸುರೇಂದ್ರನನ್ನು ಹತ್ಯೆ ಮಾಡಬೇಕು ಎಂದು ಗಿರೀಶ್ನನ್ನು ಪ್ರಚೋದಿಸಿದ್ದಾನೆ ಎಂದು ತಿಳಿದು ಬಂದಿದೆ.
ಇನ್ನು ಈ ಹತ್ಯೆಗೈದ ಬಳಿಕ ದಿವ್ಯರಾಜ್ ಹಾಗೂ ಅನಿಲ್ ಪಂಪ್ವೆಲ್ ವಾಹನದ ವ್ಯವಸ್ಥೆ ಮಾಡಿದ್ದು ಉಜಿರೆ ಹಾಗೂ ಸುತ್ತಮುತ್ತಲಿನ ಪರಿಸರದಲ್ಲಿ ತಂಗಲು ಬೆಳ್ತಂಗಡಿ ನಿವಾಸಿ ರಾಜೇಶ್ ಎಂಬಾತ ವಸತಿ ವ್ಯವಸ್ಥೆ ಮಾಡಿದ್ದನು. ಆತನ ಬಳಿ ಆರೋಪಿಗಳ 50,000 ರೂ ನಗದು ಮತ್ತು ಮೊಬೈಲ್ ಫೋನ್ ಇದೆ. ಆರೋಪಿಗಳು ಪರಾರಿಯಾಗಲು ಆತ ತನ್ನ ಓಮ್ನಿ ಕಾರನ್ನು ನೀಡಿದ್ದನು. ಪ್ರಸ್ತುತ ಈ ಎಲ್ಲಾ ಆರೋಪಿಗಳನ್ನು ಬಂಧಿಸಲಾಗಿದೆ.
ಆರೋಪಿ ದಿವ್ಯರಾಜ್ ಪಂಪ್ವೆಲ್ ನಿವಾಸಿಯಾಗಿದ್ದು , 2017 ರಲ್ಲಿ ಬೆಂಜನಪದವದಲ್ಲಿ ಅಶ್ರಫ್ ಕಲಾಯಿ ಹತ್ಯೆಯ ಆರೋಪಿಯಾಗಿದ್ದಾನೆ. ಹಾಗೆಯೇ ಆತನು ಕಿಶನ್ ಹೆಗ್ಡೆ ಆಪ್ತನಾಗಿದ್ದ.
ಶರಣ್ ಅಲಿಯಾಸ್ ಆಕಾಶ್ ಭವನ್ ಶರಣ್ ವಿರುದ್ದ ಸುಮಾರು 20 ಪ್ರಕರಣಗಳು ದಾಖಲಾಗಿದೆ. ಮಂಗಳೂರಿನ ದಕ್ಷಿಣದಲ್ಲಿ ಎರಡು, ಬರ್ಕೆಯಲ್ಲಿ ಒಂದು, ಕಾವೂರಿನಲ್ಲಿ ಒಂದು, ಸುಳ್ಯದಲ್ಲಿ ಒಂದು ಒಟ್ಟು ಐದು ಕೊಲೆ ಪ್ರಕರಣಗಳು ದಾಖಲಾಗಿದೆ. ಪ್ರಸ್ತುತ ಮಣಿಪಾಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಆತನನ್ನು ಬಂಧಿಸಲಾಗಿದ್ದು, ಕಳೆದ ಎರಡು ವರ್ಷಗಳಿಂದ ಬೆಂಗಳೂರು ಜೈಲಿನಲ್ಲಿದ್ದಾನೆ.
ಈ ಎಲ್ಲಾ ವಿಚಾರಣೆ, ತನಿಖೆಯ ಬಳಿಕ ಆರೋಪಿಗಳು ಹಣಕಾಸಿನ ಮತ್ತು ವೈಯಕ್ತಿಕ ದ್ವೇಷದಿಂದ ಒಳಸಂಚು ನಡೆಸಿ ಸುರೇಂದ್ರ ಬಂಟ್ವಾಳ್ನ ಹತ್ಯೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಬಂಧಿತರಾಗಿರುವ ಎಲ್ಲಾ ಆರೋಪಿಗಳು ಪೊಲೀಸರ ವಶದಲ್ಲಿದ್ದು ಉಳಿದ ಆರೋಪಿಗಳ ಪತ್ತೆಗಾಗಿ ಪೊಲೀಸರ ತಂಡವು ಕಾರ್ಯಾಚರಣೆ ನಡೆಸುತ್ತಿದೆ.
ದಕ್ಷಿಣ ಕನ್ನಡದ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಬಿ.ಎಮ್ ಲಕ್ಷ್ಮೀಪ್ರಸಾದ್, ಐಪಿಎಸ್ ಮತ್ತು ವೆಲೇಂಟೈನ್ ಡಿಸೋಜಾ ಪೊಲೀಸ್ ಉಪಾಧೀಕ್ಷಕರು ಬಂಟ್ವಾಳ ಉಪವಿಭಾಗರವರ ಮಾರ್ಗದರ್ಶನದಲ್ಲಿ ಪ್ರಕರಣದ ತನಿಖೆಯನ್ನು ಟಿ.ಡಿ ನಾಗರಾಜ್ ಸಿಪಿಐ ಬಂಟ್ವಾಳ ವೃತ್ತ ರವರು ನಡೆಸುತ್ತಿದ್ದು ಆರೋಪಿಗಳ ಪತ್ತೆಯ ಬಗ್ಗೆ ಅವಿನಾಶ್ ಹೆಚ್ ಗೌಡ ಪಿಎಸ್ಐ ಬಂಟ್ವಾಳ ನಗರ ಠಾಣೆ, ಪ್ರಸನ್ನ ಎಂ.ಸ್ ಪಿಎಸ್ಐ ಬಂಟ್ವಾಳ ಗ್ರಾಮಾಂತರ ಠಾಣೆ, ಸಂಜೀವ ಕೆ ಬಂಟ್ವಾಳ ಗ್ರಾಮಾಂತರ ಠಾಣೆ , ನಂದಕುಮಾರ್ ಪಿಎಸ್ಐ ಬೆಳ್ತಂಗಡಿ ಠಾಣೆ, ವಿನೋದ್ ರೆಡ್ಡಿ ಪಿಎಸ್ಐ ವಿಟ್ಲ ಠಾಣೆ, ರಾಜೇಶ್ ಕೆ ವಿ ಪಿಎಸ್ಐ ಬಂಟ್ವಾಳ ಸಂಚಾರ ಠಾಣೆ, ಕಲೈಮಾರ್ ಪಿಎಸ್ಐ ಬಂಟ್ವಾಳ ನಗರ ಠಾಣೆ, ಶ್ರೀ ಕುಮಾರ್ ಕಾಂಬ್ಳೆ ಪಿಎಸ್ಐ ಬೆಳ್ತಂಗಡಿ ಸಂಚಾರ ಠಾಣೆ. ರವಿ ಬಿ ಎಸ್ ಪಿಐ ಡಿಎಸ್ಬಿ ಮತ್ತು ಶ್ರೀ ಚೆಲುವರಾಜ್ ಪಿಐ ಡಿಸಿಐಬಿ ಹಾಗೂ ಡಿಸಿಐಬಿ ಸಿಬ್ಬಂದಿಗಳು, ತಾಂತ್ರಿಕ ವಿಭಾಗದ ಸಿಬ್ಬಂದಿಗಳು ಹಾಗೂ ಜಿಲ್ಲೆಯ ವಿವಿಧ ಠಾಣೆಗಳ ನುರಿತ ಸಿಬ್ಬಂದಿಗಳನ್ನೊಳಗೊಂಡ ಒಟ್ಟು 5 ವಿಶೇಷ ಪತ್ತೆ ತಂಡವನ್ನು ರಚಿಸಲಾಗಿತ್ತು.