ಮಂಗಳೂರು,ನ.01 (DaijiworldNews/HR): ಎರಡು ದಿನಗಳಿಂದ ನಾಪತ್ತೆಯಾಗಿದ್ದ ವ್ಯಕ್ತಿಯೊಬ್ಬರನ್ನು ಗಂಜಾ ವ್ಯಸನಿಗಳ ಗುಂಪೊಂದು ಕೊಲೆಗೈದು ಇರಾ ಸಮೀಪದ ಗುಡ್ಡವೊಂದರಲ್ಲಿ ಮೃತದೇಹವು ಹೂತು ಹಾಕಿದ್ದ ಸ್ಥಿತಿಯಲ್ಲಿ ಇಂದು ಬೆಳಗ್ಗೆ ಪತ್ತೆಯಾಗಿದೆ.


ಕೊಣಾಜೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪಾವೂರ್ ಗ್ರಾಮದ ಮಲಾರ್ ಅರಸ್ತಾನದ ಪಲ್ಲಿಯಬ್ಬ ಯಾನೆ ಪಲ್ಲಿಯಾಕ (70) ಕೊಲೆಯಾದ ವ್ಯಕ್ತಿ.
ಪಲ್ಲಿಯಾಕನನ್ನು ಗಂಜಾ ವ್ಯಸನಿಗಳ ಗುಂಪೊಂದು ಇರಾ ಬಳಿಯ ಬೆಟ್ಟದಲ್ಲಿ ಕೊಂದು ಬಳಿಕ ಹೂತು ಹಾಕಲಾಗಿದೆ ಎಂದು ವರದಿಯಾಗಿದೆ. 1.5 ಲಕ್ಷ ರೂ.ಗಳ ಹಣದ ವಿಷಯಗಳಿಗೆ ಸಂಬಂಧಿಸಿದ ಈ ಹತ್ಯೆ ನಡೆದಿದೆ ಎಂದು ತಿಳಿದುಬಂದಿದೆ.
ಅಕ್ಟೋಬರ್ 29 ರ ಗುರುವಾರ ಸಂಜೆ ಪಲ್ಲಿಯಬ್ಬ ನಾಪತ್ತೆಯಾಗಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಹಲವರನ್ನು ವಶಕ್ಕೆ ಪಡೆದು ತನಿಖೆ ನಡೆಸಲಾಗುತ್ತಿದೆ ಎಂದು ತಿಳಿದು ಬಂದಿದೆ.
ಶುಕ್ರವಾರ ಮಧ್ಯಾಹ್ನದವರೆಗೂ ಪಲ್ಲಿಯಬ್ಬ ಅವರ ಮೊಬೈಲ್ ರಿಂಗ್ ಆಗುತ್ತಿತ್ತು. ಬಳಿಕ ಸ್ವಿಚ್ಡ್ ಆಫ್ ಆಗಿತ್ತು. ಇದರಿಂದ ಸಂಶಯಗೊಂಡ ಪಲ್ಲಿಯಬ್ಬ ಅವರ ಸಂಬಂಧಿಕರು ಇಬ್ಬರು ಶಂಕಿತರನ್ನು ವಿಚಾರಿಸಿದಾಗ ಕೊಲೆ ಕೃತ್ಯ ಬೆಳಕಿಗೆ ಬಂದಿದೆ ಎಂದು ತಿಳಿದು ಬಂದಿದೆ.
ಈ ಬಗ್ಗೆ ಕೊಣಾಜೆ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.