ಮಂಗಳೂರು, ನ.01 (DaijiworldNews/PY): "ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಖಚಿತ. ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಪರ ಅಲೆ ಇದೆ. ಶಿರಾ ಕ್ಷೇತ್ರದಲ್ಲಿ ಮೊದಲ ಬಾರಿಗೆ ಬಿಜೆಪಿ ಗೆಲ್ಲಲಿದೆ" ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.

ಇಂದು ಉಪಚುನಾವಣೆಯ ಬಹಿರಂಗ ಪ್ರಚಾರ ತೆರೆ ಹಿನ್ನೆಲೆ ಮಂಗಳೂರಿನಲ್ಲಿ ಮಾತನಾಡಿದ ಅವರು, "ಶಿರಾ ಕ್ಷೇತ್ರದಲ್ಲಿ ಮೊದಲ ಬಾರಿಗೆ ಬಿಜೆಪಿ ಗೆಲ್ಲಲಿದೆ. ಸದ್ಯ ಎರಡೂ ಕ್ಷೇತ್ರದಲ್ಲಿ ಕೂಡಾ ಬಿಜೆಪಿ ಅಲೆ ಇದೆ. ಬಿಜೆಪಿ ಪ್ರಧಾನಿ ಮೋದಿ, ಬಿಎಸ್ವೈ ಅಭಿವೃದ್ದಿಯ ವಿಚಾರವಾಗಿ ಮಾತನಾಡುತ್ತಿದೆ" ಎಂದಿದ್ದಾರೆ.
"ಕಾಂಗ್ರೆಸ್ ಹಾಗೂ ಜೆಡಿಎಸ್ ಸೋಲಿನ ಭೀತಿ ಎದುರಿಸುತ್ತಿದೆ. ಈ ಕಾರಣಕ್ಕಾಗಿ ಈ ಎರಡೂ ಪಕ್ಷಗಳು ಭಾವನಾತ್ಮಕ, ಜಾತಿ ರಾಜಕಾರಣ ಮಾಡುತ್ತಿದೆ" ಎಂದು ತಿಳಿಸಿದ್ದಾರೆ.
"ಉಪಚುನಾವಣಾ ಫಲಿತಾಂಶದ ಬಗ್ಗೆ ಪಕ್ಷದಲ್ಲಿ ಯಾವುದೇ ರೀತಿಯಾದ ಚರ್ಚೆ ನಡೆಯುತ್ತಿಲ್ಲ. ಈ ಚುನಾವಣೆಯು ರಾಜ್ಯ ಆಡಳಿತದ ಮೇಲೆ ಯಾವುದೇ ಪರಿಣಾಮ ಬೀರದು. ಈಗಾಗಲೇ ಪಕ್ಷವು 117 ಸ್ಥಾನ ಗಳಿಸಿದ್ದು, ಭದ್ರವಾಗಿದೆ. ಅಲ್ಲದೇ, ಬಿಜೆಪಿಯು ಯಾವುದೇ ಸ್ಥಾನ ಬಿಟ್ಟುಕೊಡುವುದಿಲ್ಲ" ಎಂದು ಹೇಳಿದ್ದಾರೆ.
ಸಿಎಂ ಸ್ಥಾನ ಬದಲಾವಣೆ ಕುರಿತು ಯತ್ನಾಳ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಅವರು, "ಈಗಾಗಲೇ ಯತ್ನಾಳ್ ಅವರನ್ನು ಕರೆದು ಮಾತನಾಡಲಾಗಿದೆ. ಅಲ್ಲದೇ, ಶಿಸ್ತು ಕ್ರಮದ ಬಗ್ಗೆ ತಿಳಿಸಲಾಗಿದೆ. ಯಾವುದೋ ಹಂತದಲ್ಲಿ ಈ ರೀತಿಯಾದ ಹೇಳಿಕೆ ನೀಡಿದ್ದಾರೆ. ಬೇರೆ ಎಲ್ಲವೂ ಕೂಡಾ ಸರಿಯಾಗಿದೆ" ಎಂದಿದ್ದಾರೆ.