ಮಂಗಳೂರು, ಮೇ 28: 10ಕ್ಕೂ ಮಿಕ್ಕಿ ಜೀವಗಳನ್ನು ಬಲಿತೆಗೆದುಕೊಂಡ ಮಾರಣಾಂತಿಕ ನಿಫಾ ವೈರಸ್ ಭೀತಿಯಿಂದ ಶೇಂದಿ ವ್ಯಾಪಾರಕ್ಕೆ ಜಿಲ್ಲೆಯಲ್ಲಿ ಭಾರೀ ಹೊಡೆತ ಬಿದ್ದಿದೆ.
ಈಗಾಗಲೇ ಕೇರಳ ರಾಜ್ಯದಲ್ಲಿ 12 ಜನರನ್ನು ಬಲಿತೆಗೆದುಕೊಂಡ ಮಾರಣಾಂತಿಕ ನಿಫಾ ವೈರಸ್ ಭೀತಿಯಿಂದ ಬಾವಲಿಯ ಸಂಪರ್ಕಕ್ಕೆ ಬರುವ ಎಲ್ಲಾ ವಸ್ತುಗಳಿಂದ ಜನ ದೂರವಾಗುತ್ತಿದ್ದಾರೆ. ಹಣ್ಣುಹಂಪಲು ಸೇರಿಂದತೆ ಶೇಂದಿ ವ್ಯಾಪರಕ್ಕೂ ಭಾರೀ ನಷ್ಟ ಸಂಭವಿಸಿದೆ. ಗ್ರಾಮೀಣ ಪ್ರದೇಶದ ದೇಶಿಯ ಪಾನೀಯ ಎಂದೇ ಕರೆಯುವ ಶೇಂದಿಯ ಮೇಲೆ ನಿಫಾ ವೈರಸ್ ಪ್ರಭಾವ ಬೀರಿದ್ದು, ಕೆಲ ದಿನಗಳ ಕಾಲ ಶೇಂದಿ ಮಾರಾಟದ ಮೇಲೆ ನಿಷೇಧ ಹೇರುವ ಸಾಧ್ಯತೆ ಇದೆ ಎಂಬ ಸುದ್ದಿ ಇದೀಗ ಗ್ರಾಮೀಣ ಪ್ರದೇಶದಲ್ಲಿ ಹರಡಿದೆ.
ಬಾವಲಿಗಳು ಬಾಯಾರಿಕೆಗೆ ತಾಳೆ ಹಾಗು ತೆಂಗಿನ ಮರದ ಮೇಲೆ ಸಂಗ್ರಹಿಸಲಾಗುವ ಶೇಂದಿಯನ್ನು ಕುಡಿಯುವುದು ವಾಡಿಕೆ. ಜಿಲ್ಲೆಯ ಕೆಲ ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಾಗಿ ಮೂರ್ತೆದಾರ ಸಮುದಾಯದವರು ತಾಳೆ ಮರ ಮತ್ತು ತೆಂಗಿನ ಮರಗಳಿಂದ ಶೇಂದಿ ತೆಗೆಯುತ್ತಾರೆ. ಮರದಲ್ಲಿ ಮಣ್ಣಿನ ಮಡಕೆಯನ್ನು ಕಟ್ಟಿ ಶೇಂದಿ ಅದರಲ್ಲಿ ಸಂಗ್ರಹವಾಗುವಂತೆ ನೋಡಿಕೊಳ್ಳುತ್ತಾರೆ. ಈ ಮಡಕೆಗಳಿಗೆ ಯಾವುದೇ ಮುಚ್ಚಳಗಳು ಇರುವುದಿಲ್ಲ. ಇದರಿಂದ ಆಹಾರವನ್ನು ಹುಡುಕುತ್ತಾ ರಾತ್ರಿ ಹೊತ್ತು ತಿರುಗುವ ಈ ಬಾವಲಿಗಳು ಈ ಮಡಕೆಯಲ್ಲಿ ಸಂಗ್ರಹವಾದ ಶೇಂದಿಯನ್ನು ಕುಡಿಯುತ್ತವೆ. ಇದೀಗ ಜನರು ಶೇಂದಿ ಸೇವನೆಯಿಂದ ದೂರ ಸರಿದಿದ್ದು, ಶೇಂದಿ ವ್ಯಾಪಾರಿಗಳು ನಷ್ಟ ಅನುಭವಿಸುತ್ತಿವಂತಾಗಿದೆ.
ಮಾತ್ರವಲ್ಲ ಶೇಂದಿ ಸೇವನೆ ಇತ್ತಿಚಿನ ದಿನಗಳಲ್ಲಿ ಗಣನೀಯವಾಗಿ ಕುಗ್ಗಿದೆ ಎಂದು ಹೇಳಲಾಗಿದೆ. ಅಬಕಾರಿ ಇಲಾಖೆ ಕೆಲದಿನಗಳ ಕಾಲ ಶೇಂದಿ ಮಾರಾಟ ನೀಷೇಧಿಸುತ್ತದೆ ಎನ್ನುವ ಮಾಹಿತಿ ಹರಿದಾಡುತ್ತಿದೆ. ಅದರೆ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಲಭಿಸಿಲ್ಲ.
ಸದ್ಯ ನಿಫಾ ವೈರಸ್ ಸೋಂಕಿನ ಪ್ರಕರಣ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪತ್ತೆಯಾಗದಿದ್ದರೂ, ಜನರು ಮಾತ್ರ ಈ ವೈರಸ್ ಗೆ ಹರಡುವ ಭೀತಿಯಿಂದ ಹೊರಬಂದಿಲ್ಲ.