ಮೇ,28 : ಸಚಿವ ಸಂಪುಟ ವಿಸ್ತರಣೆಯಲ್ಲಿ ಯಾವುದೇ ತೆರನಾದ ಸಮಸ್ಯೆ ಇಲ್ಲ. ಒಂದೆರಡು ದಿನದಲ್ಲಿ ಮೈತ್ರಿ ಸರ್ಕಾರದ ಸಂಪುಟದಲ್ಲಿ ಯಾರೆಲ್ಲ ಇರುತ್ತಾರೆ ಎನ್ನುವ ಕುತೂಹಲಕ್ಕೆ ಅಂತಿಮ ತೆರೆ ಬೀಳಲಿದೆ ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ.
ಕಾಂಗ್ರೆಸ್ ಹಿರಿಯ ನಾಯಕ ಗುಲಾಂ ನಬಿ ಆಜಾದ್ ಅವರ ಮನೆಯಲ್ಲಿ ನಡೆದ ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಾ. ಜಿ. ಪರಮೇಶ್ವರ್, ಡಿ. ಕೆ. ಶಿವಕುಮಾರ್ ಅವರೊಂದಿಗೆ ಸಿಎಂ ಎಚ್.ಡಿ. ಕುಮಾರಸ್ವಾಮಿ ಸಭೆ ನಡೆಸಿದರು. ನಂತರ ಮಾಧ್ಯಮ ಪ್ರತಿನಿಧಿಯೊಂದಿಗೆ ಮಾತನಾಡಿದ ಅವರು, ಮುಖಂಡರನ್ನು ಒಳಗೊಂಡ ಸಭೆಯಲ್ಲಿ ಬಹಳಷ್ಟು ವಿಚಾರಗಳ ಬಗ್ಗೆ ಚರ್ಚೆ ನಡೆಸಿದ್ದೇವೆ. ಸಚಿವ ಸಂಪುಟ ವಿಸ್ತರಣೆಯಲ್ಲಿ ಯಾವುದೇ ಸಮಸ್ಯೆ ಅಥವಾ ಗೊಂದಲಗಳಿಲ್ಲ. ಸಂಪುಟ ಸೇರ್ಪಡೆಗೊಳ್ಳುವವರ ಹೆಸರು ಇಂದು ಸಂಜೆ ಅಥವಾ ನಾಳೆಯೊಳಗೆ ಅಂತಿಮಗೊಳ್ಳಲಿದೆ ಎಂದು ತಿಳಿಸಿದರು.
ಖಾತೆ ಹಂಚಿಕೆಯಲ್ಲಿ ಯಾವುದೇ ಸಮಸ್ಯೆ ಇಲ್ಲ .ಕೊನೆಯದಾಗಿ ರಾಹುಲ್ ಗಾಂಧಿ ಜತೆ ಚರ್ಚೆ ನಡೆಸಿ ಅಂತಿಮ ಪಟ್ಟಿ ರೆಡಿ ಮಾಡಲಿದ್ದೇವೆ. ಇಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷ ಔದಾರ್ಯದ ಮೂಲಕ ಖಾತೆ ಹಂಚಿಕೆ ನಡೆಯಲಿದೆ ಎಂದು ತಿಳಿಸಿದರು.