ಮುಡಿಪು, ನ. 01 (DaijiworldNews/SM): ನಾಪತ್ತೆಯಾದ ವ್ಯಕ್ತಿಯನ್ನು ಕೊಲೆಗೈದು, ಮೃತದೇಹವನ್ನು ಹೂತಿಟ್ಟಿರುವ ಘಟನೆಯೊಂದು ಮುಡಿಪು ಪರಿಸರದಲ್ಲಿ ನಡೆದಿದೆ. ಆಘಾತಕಾರಿ ವಿಚಾರವೆಂದರೆ, ಆರೋಪಿಗಳೇ ತಮ್ಮ ಕೃತ್ಯದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಇನ್ನು ಶವವನ್ನು ಹೂತಿಟ್ಟ ಬಂಟ್ವಾಳ ತಾಲೂಕಿನ ಮೂಳೂರು ಇರಾಪದವಿನಲ್ಲಿ ಸಹಾಯಕ ಆಯುಕ್ತರು, ತಹಶೀಲ್ದಾರ್, ಡಿಸಿಪಿ, ಎಸಿಪಿ ಹಾಗೂ ಕೊಣಾಜೆ ಪೊಲೀಸರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಶವವನ್ನು ಮೇಲಕ್ಕೆತ್ತುವ ಕಾರ್ಯಾಚರಣೆ ಭಾನುವಾರ ನಡೆಸಲಾಯಿತು.
ಪಾವೂರು ಗ್ರಾಮ ಪಂಚಾಯತ್ ನ ಮಲಾರು ನಿವಾಸಿ ಪಲ್ಲಿಯಾಕ ಯಾನೆ ಮೋನು(70) ಎಂಬವರನ್ನು ಹತ್ಯೆ ನಡೆಸಲಾಗಿದೆ. ಅ.29ರಂದು ಮೋನು ನಾಪತ್ತೆಯಾಗಿದ್ದರು. ಅಂದು ಸಂಬಂಧಿ ಯುವಕನೋರ್ವ ಪಡೆದುಕೊಂಡ ಬಡ್ಡಿಸಾಲದ ಹಣವನ್ನು ಮರುಪಾವತಿಸುವುದಾಗಿ ನಂಬಿಸಿ ರಿಕ್ಷಾದಲ್ಲಿ ಕರೆದೊಯ್ದಿದ್ದ. ಬೋಳಿಯಾರು ಮೂಲಕ ಮೋನು ಅವರನ್ನು ಕರೆದೊಯ್ದ ಚಾಲಕ, ಅಲ್ಲಿಂದ ಇತರ ನಾಲ್ಕು ಮಂದಿಯ ತಂಡವನ್ನು ಕುಳ್ಳಿರಿಸಿ ನಿರ್ಜನ ಪ್ರದೇಶವಾಗಿರುವ ಇರಾಪದವಿನ ಕಲ್ಲಿನಕೋರೆ ಬಳಿ ಕರೆದೊಯ್ದಿದ್ದ.
ಅಲ್ಲಿ ಎಲ್ಲರೂ ಸೇರಿ ಮೋನು ಅವರಲ್ಲಿದ್ದ ಬೈರಾಸಿನಿಂದ ಕುತ್ತಿಗೆಯನ್ನು ಬಿಗಿದು ಹತ್ಯೆ ನಡೆಸಿದ್ದರು. ಅಂದು ಅಲ್ಲೇ ಕಲ್ಲಿನ ಕೋರೆಯ ಹಳ್ಳದಲ್ಲಿ ಮೃತದೇಹವನ್ನು ಬಿಟ್ಟು ಬಂದಿದ್ದ ತಂಡ ಮರುದಿನ ಶುಕ್ರವಾರ ಅ.30 ರಂದು ಹಾರೆ, ಪಿಕ್ಕಾಸು ಕೊಂಡೊಯ್ದು ಗುಂಡಿ ಅಗೆದು ಮೋನು ಅವರನ್ನು ಹೂತಿಟ್ಟಿದ್ದಾರೆ. ಮೋನು ನಾಪತ್ತೆ ಕುರಿತು ಮನೆಮಂದಿ ಕೊಣಾಜೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ವಿಚಾರಣೆ ನಡೆಸಿದ ಪೊಲೀಸರು ಮೋನು ನಾಪತ್ತೆಯಾದ ದಿನ ಸಿಸಿಟಿವಿ ದಾಖಲೆಗಳನ್ನು ಸಂಗ್ರಹಿಸಿದ್ದರು. ಅದರಲ್ಲಿ ರಿಕ್ಷಾ ಹೋಗಿರುವುದನ್ನು ಗಮನಿಸಿ, ರಿಕ್ಷಾ ಚಾಲಕನನ್ನು ವಶಕ್ಕೆ ಪಡೆದುಕೊಂಡಿದ್ದರು.
ಎರಡು ದಿನಗಳ ಸತತ ವಿಚಾರಣೆ ನಂತರ ಆರೋಪಿ ಮೋನು ಅವರನ್ನು ಕೊಲೆಗೈದಿರುವ ಕುರಿತು ಕೊಣಾಜೆ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಆರೋಪಿಗಳು ಗಾಂಜಾ ವ್ಯಸನಿಗಳಾಗಿದ್ದು, ಹಣದ ವಿಚಾರಕ್ಕೆ ಸಂಬಂಧಿಸಿ ಕೃತ್ಯ ನಡೆಸಿರುವ ಸಾಧ್ಯತೆಗಳಿವೆ ಎನ್ನಲಾಗಿದ್ದು, ವಿಚಾರಣೆ ಮುಂದುವರೆಸಲಾಗಿದೆ.
ಘಟನಾ ಸ್ಥಳಕ್ಕೆ ಸಹಾಯಕ ಪೊಲೀಸ್ ಆಯುಕ್ತ ರವಿಚಂದ್ರ ನಾಯಕ್, ತಹಶೀಲ್ದಾರ್ ರಶ್ಮಿ, ಡಿಸಿಪಿ ವಿನಯ್ ಗಾಂವ್ಕರ್, ಎಸಿಪಿ ರಂಜಿತ್ ಗಂಡೂರಿ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.